ಡಾ.ಅಂಬೇಡ್ಕರ್ ಅವರಿಗೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವಮಾನಿಸಿದ ಪ್ರಕರಣ: ರಾಜಧಾನಿಯಲ್ಲಿ ಬಂಡ್ಡೆದ್ದ ನೀಲಿ ಸೈನ್ಯ

JANANUDI.COM NETWORK

ಬೆಂಗಳೂರು: ಬೆಂಗಳೂರು  ನಗರದ ಕೇಂದ್ರ ಭಾಗ ಇಂದು ಅಕ್ಷರಶಃ ನೀಲಿ ಸೈನ್ಯದಿಂದ ಕೂಡಿಹೋಗಿತ್ತು. ಮೆಜೆಸ್ಟಿಕ್ ಸುತ್ತಮುತ್ತ, ರೈಲು ನಿಲ್ದಾಣದಿಂದ ವಿಧಾನಸೌಧಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ನೀಲಿ ಸಾಗರದಂತೆ ಕಾಣುತಿತ್ತು. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ನಡೆಸಿದ ಐತಿಹಾಸಿಕ ಪ್ರತಿಭಟನೆಯ ಕಾರಣದಿಂದ ಎಲ್ಲೆಲ್ಲೂ ನೀಲಿ ಭಾವುಟಗಳು, ಅಂಬೇಡ್ಕರ್ ಭಾವಚಿತ್ರಗಳು, ಜೈಭೀಮ್ ಘೋಷಣೆಗಳು ರಾಹಧಾನಿಯಲ್ಲಿ ಮೊಳಗಿದವು.

ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರು ವಿಧಾನಸೌಧದತ್ತ ಧಾವಿಸಿದಾಗ ನೀಲಿ ಸೈನ್ಯದ ಹಿಂಡು ಕಾಣತೊಡಗಿತು. ಪ್ರತಿಭಟನಾನಿರತರು ಸಿಎಂ ಸ್ಥಳಕ್ಕೆ ಆಗಮಿಸಬೇಕೆಂದು ಘೋಷಣೆ ಕೂಗುತ್ತಿದ್ದರು. ಇದೇ ಸಂದರ್ಭದಲ್ಲಿ ಸಚಿವ ಮುನಿರತ್ನ ಜೊತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಥಳಕ್ಕೆ ಆಗಮಿಸಿ ಮಾತನಾಡಿದರು. 

“ನೀವೆಲ್ಲಾ ಇಲ್ಲಿ ಬಂದಿರುವ ವಿಚಾರವನ್ನು ನಿಮ್ಮ ನಾಯಕರುಗಳು ಎಲ್ಲಾ ವಿವರಗಳನ್ನು ನನಗೆ ತಿಳಿಸಿದ್ದಾರೆ. ಇದೊಂದು ದುರದೃಷ್ಟಕರ ವಿಚಾರ. ಯಾವ ಕಾರಣದಿಂದಲೂ ಕೂಡ ಅವಮಾನವಾಗಲಿ, ಕುಂದು ಬರುವ ರೀತಿಯಲ್ಲಾಗಲಿ, ನಾವು ಯಾರೂ ಕೂಡಾ ನಡೆದುಕೊಳ್ಳಬಾರದು. ಈ ಘಟನೆ ನಮ್ಮೆಲ್ಲರಿಗೂ ಕಣ್ಣನ್ನು ತೆರೆಸಿದೆ. ನಾನು ಹೇಳಲು ಬಯಸೋದು ಇಷ್ಟೆ. ನಿಮ್ಮೆಲ್ಲರ ಭಾವನೆಗಳನ್ನು ನಾನು ಯಾರು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುತ್ತೇನೆ. ಆದ್ದರಿಂದ ಅಂಬೇಡ್ಕರ್ ಅವರ ಘನತೆ, ಗೌರವ, ಎತ್ತಿಹಿಡಿಯುವುದರಲ್ಲಿ ನಾವು ಮುಂದೆ ನಿಂತು ಆ ಕೆಲಸವನ್ನು ನಾವು ಮಾಡುತ್ತೇವೆ” ಎಂದು ಅಶ್ವಾಷನೆ ನೀಡಿದರು.” ಈ ಕೆಲಸ ಸಂವಿಧಾನಬದ್ಧವಾಗಿ ಆಗಬೇಕು, ಸಂವಿಧಾನದ ಚೌಕಟ್ಟಿನಲ್ಲಿ ಇದೆಲ್ಲಾ ಆಗಬೇಕು. ಆದ್ದರಿಂದ ಸಂವಿಧಾನದ ರೀತಿಯಲ್ಲಿ, ಅಂಬೇಡ್ಕರ್ ಅವರ ರೀತಿಯಲ್ಲಿ ನಿಮಗೆ‌ ನ್ಯಾಯ‌ ಕೊಡಿಸುವ ಕೆಲಸವನ್ನು ನಾನು ಮಾಡ್ತಿನಿ. ಆದ್ದರಿಂದ ತಾವೆಲ್ಲರೂ ಕೂಡ ಶಾಂತಿ, ಸಮಾಧಾನದಿಂದ ಇರಬೇಕು. ನಿಮ್ಮ ನಾಯಕರುಗಳಿಗೆ ಮುಂದಿನ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಲು ಅನುವು ಮಾಡಿಕೊಡಬೇಕು. ನಾನು ಕೂಡ ನಿಮ್ಮ ನಾಯಕರುಗಳ ಜೊತೆಗಿದ್ದು, ಆ ಕೆಲಸ ಕಾರ್ಯಗಳು ಜಯಶಾಲಿಯಾಗುವವರೆಗೂ ಜೊತೆಯಲ್ಲಿಯೇ ಇರುತ್ತೆನೆ’  ಎಂದು ಹೇಳಿ ಅಲ್ಲಿಂದ ತೆರಳಿದರು.

ಪ್ರತಿಭಟನೆಯಲ್ಲಿ ಉರಿಲಿಂಗಿ ಪೆದ್ದಮಠದ ಜ್ಞಾನಪ್ರಕಾಶ ಸ್ವಾಮೀಜಿ, ವಿವಿಧ ಸಮುದಾಯಗಳ ಮುಖಂಡರು, ನಟ ಚೇತನ್, ಬಿ.ಗೋಪಾಲ್, ಎಂ.ವೆಂಕಟಸ್ವಾಮಿ, ಹೆಚ್.ಮೋಹನ್ ಕುಮಾರ್, ಪ್ರೊಫೆಸರ್ ಹರಿರಾಮ್, ಮಾವಳ್ಳಿ ಶಂಕರ್, ಎಂ.ಕೃಷ್ಣಮೂರ್ತಿ, ಪುರುಷೋತ್ತಮ್, ಶ್ರೀನಾಥ್ ಪೂಜಾರಿ, ದೇವರಾಜ್ ಒಡೆಯರ್, ಹ‌.ರಾ.ಮಹೇಶ್, ಮೂರ್ತಿ ಭೀಮ್ ರಾವ್ ಮುಂತಾದವರು ಭಾಗವಹಿಸಿದ್ದರು.