

ಕೋಲಾರ : ಪತ್ರಕರ್ತರು ಸ್ವಾಭಿಮಾನ ಮತ್ತು ನಿರ್ದಾಕ್ಷಿಣ್ಯ ಮನೋಭಾವ ಉಳಿಸಿ ಕೊಂಡು ವೃತ್ತಿ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ , ಇಂದಿನ ಬಹುತೇಕ ಪತ್ರಕರ್ತರಲ್ಲಿ ಈ ಎರಡೂ ಗುಣಗಳ ಕೊರತೆ ಕಂಡುಬರುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದಿಸಿದರು.
ಕೆ ಯು ಡಬ್ಲ್ಯೂ ಜೆ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ್ ಅವರನ್ನು ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಅಭಿನಂದಿಸಿ ಅವರು ಮಾತನಾಡಿದರು. ವೃತ್ತಿಯಲ್ಲಿ ಹಮ್ಮುಬಿಮ್ಮು ಇಲ್ಲದೆ ಸ್ವಾಭಿಮಾನ ಹಾಗೂ ನಿರ್ದಾಕ್ಷಿಣ್ಯ ಮನೋ ಭಾವ ಉಳಿಸಿಕೊಂಡಿದ್ದ ಎಂ.ಜಿ. ಪ್ರಭಾಕರ್ ಅವರ ಹೊನ್ನುಡಿ ಪತ್ರಿಕೆಯ ಕಚೇರಿಯು 90 ರ ದಶಕದಲ್ಲಿ ಕೋಲಾರ ಜಿಲ್ಲೆಯ ಸಾಮಾಜಿಕ ಹೋರಾಟಗಳ ವೇದಿಕೆ ಇದ್ದಂತೆ ಕಾರ್ಯನಿರ್ವಹಿಸುತ್ತಿತ್ತು .
ಜಿಲ್ಲೆಯ ಹೋರಾಟಗಳ ಕುರಿತು ಪ್ರಮುಖ ನಿರ್ಧಾರ ಗಳನ್ನು ಹೊನ್ನುಡಿ ಕಚೇರಿಯಲ್ಲಿಯೇ ಕೈಗೊಳ್ಳಲಾಗುತ್ತಿತ್ತು. ಎಂ.ಜಿ.ಪ್ರಭಾಕರ್ ಅವರು ಸಾಮಾಜಿಕ , ಕಾರ್ಮಿಕ , ಹಾಗೂ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿ ವಹಿಸುತಿದ್ದರು ಎಂದು ನೆನಪಿಸಿಕೊಂಡರು.
ಕೆ ಯು ಡಬ್ಲ್ಯೂ ಜೆ ಖಜಾಂಚಿ ಎಂ. ವಾಸುದೇವ ಹೊಳ್ಳ ಮಾತನಾಡಿ , ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ ಎಂ.ಜಿ. ಪ್ರಭಾಕರ್. ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಹೇಳಿದರು. ಬೆಂಗಳೂರಿನಲ್ಲಿ ರಾಜ್ಯ ಸಂಘದ ಭವನ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ . 5 ಕೋಟಿ ಹಣ ಬಿಡುಗಡೆಯಾಗಿದ್ದು , 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ , ಪತಕರ್ತರಿ ಹೊನ್ನುಡಿ ಪತ್ರಿಕೆ ಕಾಲೇಜು ಇದ್ದಂತೆ . ಮನಸ್ಸು ಮಾಡಿದ್ದರೆ ಎಂ.ಜಿ.ಪ್ರಭಾಕರ್ ಅವರು ಮಂತ್ರಿ ಆಗಬಹುದಿತ್ತು. ಅಷ್ಟು ಪ್ರಭಾವಿ ಪತ್ರಕರ್ತ. ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುವ ಪತ್ರಕರ್ತ , ಕನ್ನಡದ ಹೋರಾಟದಲ್ಲೂ ಮುಂಚೂಣಿಯಲ್ಲಿ ನಿಂತರು. ಕರ್ನಾಟಕ ರಾಜ್ಯೋತ್ಸವವನ್ನು ಮಿನಿ ದಸರೆಯಾಗಿ ರೂಪಿಸಿದವರು ಎಂ.ಜಿ.ಪ್ರಭಾಕರ್ ಎಂದು ಬಣ್ಣಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ ವಿ.ಮುನಿರಾಜು ಮಾತನಾಡಿ ,ಎಂ.ಜಿ. ಪ್ರಭಾಕರ್ ಅವರ ಹೋರಾಟದ ಫಲವಾಗಿ ಕೋಲಾರಕ್ಕೆ ರೈಲು ಮಾರ್ಗ ಉಳಿದಿದೆ. ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರು. ಹಲವರಿಗೆ ಮಾರ್ಗ ಹಾಕಿಕೊಟ್ಟಿದ್ದಾರೆ. ಎಂ.ಜಿ. ಪ್ರಭಾಕರ್ ಅವರ ಮಾತಿಗೆ ಜಿಲ್ಲಾಡಳಿತ ನಡುಗುತಿತ್ತು. ಎಷ್ಟು ಸನ್ಮಾನ ಮಾಡಿದರೂ ಸಾಲದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ , ಧೈರ್ಯ ನೀಡುವವರೇ ಮುಂದಿನ ನಾಯಕರು. ಅಂಥವರಲ್ಲಿ ಎಂ.ಜಿ. ಪ್ರಭಾಕರ್ ಕೂಡ ಒಬ್ಬರು . ಅವರು ಎಲ್ಲಾ ಪತ್ರಕರ್ತರಿಗೆ ಮಾದರಿ ಎಂದರು. ಪತ್ರಕರ್ತ ಪ್ರಕಾಶ್ ( ಮಾಮಿ ) , ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ್ , ಎಸ್.ಚಂದ್ರಶೇಖರ್ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಪ್ರಭಾಕರ್ , ನನಗೆ ಸರ್ವಸ್ವ ಪತ್ರಿಕಾ ವೃತ್ತಿ . ಬೇರೊಂದು ಕೆಲಸ ಗೊತ್ತಿಲ್ಲ . ಪತ್ರಿಕೆ ಬೆಳೆಸಲು ನಾನೊಬ್ಬನೇ ಕಾರಣ ಅಲ್ಲ . ಹಲವಾರು ಮಂದಿ ಸೇರಿ ಕಟ್ಟಿದ ಪತ್ರಿಕೆ . ಈ ಪ್ರಶಸ್ತಿ ಎಲ್ಲರಿಗೂ ಸೇರಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎನ್.ಮುನಿವೆಂಕಟೇಗೌಡ , ಓಂಕಾರಮೂರ್ತಿ , ಕೆ.ಆಸೀಫ್ ಪಾಷ , ಸಂದಕುಮಾರ್ , ಎನ್.ಶಿವಕುಮಾರ್ , ಎನ್ . ಗಂಗಾಧರ್ , ಎಂ.ಲಕ್ಷ್ಮಣ , ಎನ್.ಸತೀಶ್ , ಬಾಲನ್ , ಬೆಟ್ಟಣ್ಣ , ಪವನ್ , ಅಮರ್ , ಕಿತ್ತಂಡೂರು ವೆಂಕಟರಾಮ್ , ಪುರು ಷೋತ್ತಮ್ , ಜೆ.ಅಂಬರೀಶ್ , ಎಂ . ವಿನೋದ್ , ಮುಕ್ತಿಯಾರ್ ಅಹಮದ್ , ಸರ್ವಜ್ಞಮೂರ್ತಿ , ಶ್ರೀಹರಿ , ಶ್ರೀಕಾಂತ್ , ಶಿವುಸಸ್ಯ , ಪ್ರಕಾಶ್ ಉಪಸ್ಥಿತರಿದ್ದರು.