ಉಡುಪಿ: ‘ಗೋದಲಿ ಅಂದರೆ ಶಾಂತಿ ಸಮಾಧಾನದ ಸಂದೇಶ, ಗೋದಲಿ ಅಂದರೆ ಭೂಮಿ ಮತ್ತು ಸ್ವರ್ಗದ ಮಿಲನ, ಶಾಂತಿ ಸಮಾಧಾನಕ್ಕಾಗಿ ಶ್ರಮಿಸಲಿಕ್ಕೆ ಯೇಸು ಅಹ್ವಾನ ನಮಗೆಲ್ಲರಿಗೂ ನೀಡಿದ್ದಾರೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದರು.
ಅವರು ಡಿ.16 ರಂದು ಉಡುಪಿ ಶೋಕಮಾತಾ ದೇವಾಲಯದ ಸಭಾಂಗಣದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಆಯೋಜಿಸಿದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕ್ರಿಸ್ಮಸ್ ಸಂದರ್ಭದಲ್ಲಿ ಎಲ್ಲೆಡೆಯೂ ಗೋದಲಿಗಳು ಕಾಣುತ್ತವೆ, ಗೋದಲಿಯಲ್ಲಿ ಏನಿದೆ, ಅಲ್ಲಿ ಪುಟ್ಟ ಶಿಸುವಿದೆ, ಅವರ ಸುತ್ತಮುತ್ತ ಕುರಿಗಳು ಪಶುಗಳಿದ್ದಾವೆ, ಸಮಾಜದಲ್ಲಿ ಹಿಂದುಳಿದ ಕುರುಬರಿದ್ದಾರೆ, ಇನ್ನೊಂದೆಡೆ ಜ್ಞಾನಿಗಳು, ಅರಸರು ಇದ್ದಾರೆ. ಅಂದರೆ ಭೂಮಿ ಮತ್ತು ಸ್ವರ್ಗದ ಒಂದು ಮಿಲನ ಅಲ್ಲಿ ಆಗಿದೆ. ದೇವರ ಒಬ್ಬನೇ ಪುತ್ರ ಯೇಸು ಪುಟ್ಟ ಕಂದನಾಗಿ ಧರೆಗಿಳಿದಿದ್ದಾನೆ, ಯೇಸು ನಮಗಾಗಿ ಶಿಲುಭೆಯ ಮೇಲೆ ಪ್ರಾಣ ತೆತ್ತು, ಪ್ರೀತಿ ಏನೆಂದು ತೋರಿಸಿಕೊಟ್ಟರು. ಎಲ್ಲರೂ ಪ್ರೀತಿ ಸಮಾಧಾನದಿಂದ ಸಹಬಾಳ್ವೆ ನಡೆಸೋಣ’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ ಅವರು ಮಾತನಾಡಿ, ಪತ್ರಕರ್ತರು ಸಮಾಜದ ಕಣ್ಣುಗಳು, ಕಾರ್ಯಕ್ರಮಗಳು ನಡೆದರೆ ಸಾಲದು, ಅದನ್ನು ಇತರರಿಗೆ ತಿಳಿಸುವ ಅತ್ಯಂತ ಜವಾಬ್ದಾರಿಯುತ ಕರ್ತವ್ಯ ಪತ್ರಕರ್ತರವರದಾಗಿದೆ. ಕ್ರಿಸ್ಮಸ್ ಹಬ್ಬ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿಗೆ ಸಾರಿದೆ. ಯೇಸು ಕ್ರಿಸ್ತರು ನೀಡಿದ ಸಂದೇಶದಂತೆ ಬಾಳಲು ಪ್ರತಿಯೊಬ್ಬರು ಪ್ರಯತ್ನಿಸೋಣ ಎಂದರು.
ಉಡುಪಿ ಜಿಲ್ಲಾ ವಾರ್ತಾಧಿಕಾರಿ ಬಿ ಮಂಜುನಾಥ್ ಸಮಾಜಕ್ಕೆ ಸಹಬಾಳ್ವೆಗೆ ಹಾನಿಯುಂಟಾಗುವಂತಹ ಸಂದೇಶಗಳು ಬರುತ್ತಾ ಇರುತ್ತವೆ, ಆದರೆ ನಾವು ಸಹಬಾಳ್ವೆಗೆ ಆಧ್ಯತೆ ನೀಡಿ ಮಾನವಾರಾಗಿ ಬದುಕಲು ಪ್ರಯತ್ನ ಪಡೋಣ’ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮಾತಾನಾಡಿ ‘ಸಮಾಜದಲ್ಲಿ ಶಾಂತಿ ಸಮಾಧಾನ ಕೆಡಿಸುವಂತಹ ಪ್ರಯತ್ನ ಆಗುತ್ತದೆ, ಆದರೆ ನಾವು ಅಂತವರಿಗೆ ಸಹಕರಿಸುವುದು ಬೇಡ, ಶಾಂತಿ ಪ್ರೀತಿಯಿಂದ ಬದುಕೋಣ’ ಎಂದರು. ಉಡುಪಿ ಪತ್ರಿಕಾ ಭವನದ ನೂತನ ಸಂಚಾಲಕ ಹಾಗೂ ಸಹ ಸಂಚಾಲಕರಾದ ಅಜಿತ್ ಆರಾಡಿ ಮತ್ತು ಅಂಕಿತ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಕುಲಪತಿ ವಂ|ರೋಶನ್ ಡಿ’ಸೋಜಾ, ಮಿಲಾಗ್ರಿಸ್ ಕ್ಯಾಥೆಡ್ರಲ್ ನ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ಮತ್ತು ಉಡುಪಿ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಸ್ವಾಗತಿಸಿ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವಂದಿಸಿದರು. ಉಜ್ವಾಡ್ ಪತ್ರಿಕೆಯ ಸಂಪಾದಕ ವಂ|ರೊಯ್ಸನ್ ಫೆನಾರ್ಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಫೇಡರಲ್ ಬ್ಯಾಂಕ್ ಸಹಕಾರ ನೀಡಿತ್ತು.