ಸಂತ ಜೆರೋಸಾ ಹೈಸ್ಕೂಲ್ ಮಂಗಳೂರು ಇಲ್ಲಿ ಫೆಬ್ರವರಿ 10 2024ರಂದು ಶಾಲೆಯ ಇಂಗ್ಲೀಷ್ ಟೀಚರ್ ಹೇಳಿದ ಪಾಠದ ವಿಷಯದಲ್ಲಿ ಸ್ಥಳೀಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಮತ್ತು ಹಲವು ಸಂಘಟನೆಯ ಕಾರ್ಯಕರ್ತರು ಮಾಡಿದ ಆಪಾದನೆಯಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ ಎಂಬುದಾಗಿ ಸ್ಥಳೀಯ ಪೋಲಿಸರ ವರದಿಯಲ್ಲಿ ಉಲ್ಲೇಖಿಸಲಾಗಿರುವುದು ತಿಳಿದು ಬಂದಿರುತ್ತದೆ. ಹೀಗಿರುವಾಗ ಶಾಸಕರ ಮುಖಂಡತ್ವದಲ್ಲಿ ನಡೆದ ಘಟನೆಗಳು ಖಂಡನೀಯವಾಗಿರುತ್ತವೆ ಎಂದು ಹೇಳಲು ವಿಷಾದಿಸುತ್ತೇವೆ. ನಿಷ್ಪಕ್ಷ ನ್ಯಾಯ ನೀಡಬೇಕಾದ ಶಾಸಕರು ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಶಾಲಾ ಮಕ್ಕಳನ್ನು ಒಟ್ಟುಕೂಡಿಸಿ, ಅವರನ್ನು ಉದ್ರೇಕಿಸಿ ಶಿಕ್ಷಕರ ಹಾಗೂ ಅದೇ ಶಾಲೆಯ ವಿರೋಧ ಘೋಷಣೆ ಕೂಗಿ ಅಪಹಾಸ್ಯ ಮಾಡಿರುವುದು ಖಂಡನೀಯವಾಗಿದೆ.
ರಾಷ್ಟ್ರಕವಿ ಟಾಗೋರ್ರವರ ಪದ್ಯವನ್ನು ಶಾಲೆಯ ಶಿಕ್ಷಕಿ ಭೋದಿಸುವಾಗ ಹೇಳಿದ ವಿಷಯಗಳನ್ನು ಹೆತ್ತವರು ಎಂದು ಹೇಳುವವರು ಆಡಿಯೋ ಮೂಲಕ ಪ್ರಚಾರ ಮಾಡಿ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಸಂಘಟನೆಯವರನ್ನು ಒಟ್ಟುಗೂಡಿಸಿ ಶಾಲೆಯ ಹೆಸರಿಗೆ ಮಸಿ ಬಳಸಲು ಪಿತೂರಿ ನಡೆಸಿರುವುದಾಗಿದೆ.
ಸುಮಾರು 60 ವರುಷಗಳಿಂದ ಧರ್ಮಭಗಿನಿಯರು ನಡೆಸಿಕೊಂಡು ಬಂದಿರುವ ಈ ಶಾಲೆಯಲ್ಲಿ ಅಸಂಖ್ಯಾಂತ ಹೆಣ್ಣು ಮಕ್ಕಳು ವಿವಿಧ ಧರ್ಮಜಾತಿಗೆ ಸೇರಿರುವವರು ವಿಧ್ಯಾಭ್ಯಾಸ ಪಡೆದಿರುತ್ತಾರೆ. ಯಾವುದೇ ಒಂದು ಕಪ್ಪು ಚುಕ್ಕೆ ಈ ಶಾಲೆಗೆ ಇದುವರೆಗೂ ಇರುವುದಿಲ್ಲ್ಲ. ಶಾಲೆಯ ಮಕ್ಕಳ ಪಠ್ಯ ಚಟುವಟಿಕೆಗಳ ಜೊತೆ ಮಕ್ಕಳ ವೈಯಕ್ತಿಕ ಬೆಳವಣಿಗೆ ಮತ್ತು ಅವರ ಆರೋಗ್ಯದ ಬಗ್ಗೆ ಶಾಲೆಯವರು ಕಾಳಜಿ ವಹಿಸಿರುವ ಹಲವಾರು ದೃಷ್ಟಾಂತಗಳು ಇವೆ.
ಹೀಗಿರುವಾಗ ಸ್ಥಳೀಯ ಶಾಸಕರು ಶಾಲಾ ಆಡಳಿತ ಮಂಡಳಿಯವರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಮಕ್ಕಳಿಂದ ಘೋಷಣೆ ಕೂಗಿಸಿ ಪ್ರತಿಭಟನೆ ನಡೆಸಿ ಬಲವಂತವಾಗಿ ಶಿಕ್ಷಕಿಯನ್ನು ವಜಾಗೊಳಿಸಲು ಒತ್ತಡ ಹಾಕಿ, ವಜಾಗೊಳಿಸಿರುವುದು ಎಷ್ಟು ಸರಿ…? ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿ ಆನಂತರ ಮಕ್ಕಳೊಂದಿಗೆ ನರ್ತಿಸಿ ಸಂತೋಷ ಪಟ್ಟಿರುವುದು ಖಂಡನೀಯವಾಗಿರುತ್ತದೆ.
ಸ್ಥಳೀಯ ಮಾದ್ಯಮಗಳ ವರದಿ ಪ್ರಕಾರ ಈ ಘಟನೆಯ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಕಾರ್ಪೋರೇಟರ್ ಹಾಗೂ ನೆರೆಯ ಶಾಸಕರಾದ ಶ್ರೀ ಭರತ್ ಶೆಟ್ಟಿ ಮುಂತಾದವರು ಬಂದು ಕುಮ್ಮಕ್ಕು ನೀಡಿರುವುದು ಹಾಗೂ ಹೆದರಿಕೆ ಹುಟ್ಟಿಸಿದ್ದುದರ ಬಗ್ಗೆ ತಾವು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು.
ಈ ಘಟನೆಯ ಬಗ್ಗೆ ಐಎ.ಎಸ್ ಅಧಿಕಾರಿಯವರ ಬದಲು ಹೈಕೋರ್ಟ್ನ ನಿವೃತ್ತ ನ್ಯಾಯಧೀಶರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿ ಬಂಟ್ವಾಳ ತಾಲೂಕು ತಹಶೀಲ್ದಾರ್ ರವರ ಮುಖಾಂತರ ಸನ್ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಇವರಿಗೆ ಕಥೊಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಪರವಾಗಿ ಮನವಿಯನ್ನು ಸಲ್ಲಿಸಿರುತ್ತೇವೆ. ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಬಂಟ್ವಾಳ ವಲಯದ ಆದ್ಯಾತ್ಮಿಕ ನಿರ್ದೇಶಕರು ವಂ| ವಲೇರಿಯನ್ ಡಿಸೋಜ, ಉಪಾಧ್ಯಕ್ಷರಾದ ಮೊಲಿ ಟೆಲ್ಲಿಸ್, ಕಾರ್ಯದರ್ಶಿ ಆಲ್ವಿನ್ ಡಿಸೋಜ, ಕೇಂದ್ರಿಯ ನಿಕಟ ಪೂರ್ವ ಅಧ್ಯಕ್ಷರಾದ ಸ್ಟೇನಿ ಲೋಬೊ, ಅಗ್ರಾರ್ ಚರ್ಚ್ನ ಸಹಾಯಕ ಧರ್ಮಗುರುಗಳು, ಧರ್ಮಭಗಿನಿಯರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.