ಜೆಡಿಎಸ್ ಕಾರ್ಯಕರ್ತರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿರುವ ಪಂಚರತ್ನ ರಥಯಾತ್ರೆ ಯಶಸ್ಸಿಗೆ ಸಹಕರಿಸಬೇಕು:ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ನ.22 ರಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿರುವ ಪಂಚರತ್ನ ರಥಯಾತ್ರೆ ಯಶಸ್ಸಿಗೆ ಸಹಕರಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಂಚರತ್ನ ಯೋಜನೆ ಜೆಡಿಎಸ್ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ಸರ್ವತೋಮುಖ ಪ್ರಗತಿಗೆ ಪೂರಕವಾಗಿದೆ. ಆ ಕುರಿತು ಜನರ ಗಮನ ಸೆಳೆಯುವ ಉದ್ದೇಶದಿಂದ ಪಂಚರತ್ನ ರಥಯಾತ್ರೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರ ಸುಗಟೂರು ಗ್ರಾಮದಲ್ಲಿ ಡಿ.22 ರಂದು ಬೆಳಿಗ್ಗೆ 10 ಗಂಟೆಗೆ ರಥಯಾತ್ರೆ ಪ್ರಾರಂಭಿಸಲಾಗುವುದು. ರೋಜೇನಹಳ್ಳಿ, ಹೋಳೂರು, ಯಲ್ದೂರು, ಶ್ರೀನಿವಾಸಪುರ, ಪುಂಗನೂರು ಕ್ರಾಸ್, ಲಕ್ಷ್ಮೀಪುರ, ರಾಯಲ್ಪಾಡ್ ಮೂಲಕ ಗೌನಿಪಲ್ಲಿಯಲ್ಲಿ ಕೊನೆಗೊಳಿಸಲಾಗುವುದು. ಅಂದು ಗೌನಿಪಲ್ಲಿ ಸಮೀಪದ ನಕ್ಕಲಗಡ್ಡ ಗ್ರಾಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಡೆಸುವರು ಎಂದು ಹೇಳಿದರು.
ನಕ್ಕಲಗಡ್ಡ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರೇ ಹೆಚ್ಚಾಗಿ ವಾಸಿಸುತ್ತಾರೆ. ಅವರ ಸಮಸ್ಯೆ ಅರಿಯುವ ಹಾಗೂ ಪರಿಹಾರ ಸೂಚಿಸುವ ಉದ್ದೇಶದಿಂದ ವಾಸ್ತವ್ಯಕ್ಕೆ ಆ ಗ್ರಾಮ ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ರಥಯಾತ್ರೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹೀಂ ಭಾಗವಹಿಸಲಿದ್ದಾರೆ. ಇತರ ಪಕ್ಷಗಳ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೊಪದಲ್ಲಿ ತೊಡಗಿದ್ದಾರೆ ಆದರೆ ಜೆಡಿಎಸ್ ರಥಯಾತ್ರೆ ನಡೆಸುವುದರ ಮೂಲಕ ಜನರ ಸಮಸ್ಯೆ ನಿವಾರಣೆಗೆ ಪೂರಕ ಪ್ರಯತ್ನ ನಡೆಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಆಶೀರ್ವಾದದಿಂದ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.