ಜೆಡಿಎಸ್‍ಗೆ ಐದು ವರ್ಷ ಅಧಿಕಾರ ನೀಡಿದಲ್ಲಿ ನದಿ ಮೂಲದಿಂದ ನೀರು ಕೊಡುತ್ತೇನೆ :ಎಚ್.ಡಿ.ಕುಮಾರಸ್ವಾಮಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜೆಡಿಎಸ್‍ಗೆ ಐದು ವರ್ಷ ಅಧಿಕಾರ ನೀಡಿದಲ್ಲಿ ರೂ.5 ಲಕ್ಷ ಕೋಟಿ ಸಂಗ್ರಹಿಸಿ ನದಿ ಮೂಲದಿಂದ ನೀರು ಕೊಡುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿನ ರಾಜಕಾರಣಿಗಳು ಜಿಲ್ಲೆಯ ಜನರಿಗೆ ಕೊಳಚೆ ನೀರು ಕುಡಿಸುತ್ತಿದ್ದಾರೆ. ಕೆಸಿ ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸುವ ಕೆಲಸ ಸಾಧ್ಯವಾಗಿಲ್ಲ. ಯರಗೋಳು ನೀರಾವರಿ ಕಾಮಗಾರಿ ಇನ್ನೂ ಮುಗಿದಿಲ್ಲ. ಕೆಲವರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಎತ್ತಿನ ಹೊಳೆಯಿಂದ ನೀರು ಹರಿಸುವ ಕಾಮಗಾರಿಯ ವೆಚ್ಚ ರೂ.8 ಸಾವಿರ ಕೋಟಿಯಿಂದ ರೂ.25 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಕಾಮಗಾರಿ ಪ್ರಾರಂಭವಾಗಿ 10 ವರ್ಷ ಕಳೆದರೂ ಅರ್ಧ ದಾರಿಯನ್ನೂ ಮುಟ್ಟಿಲ್ಲ. ಆದರೆ ಕಾಮಗಾರಿ ಹಣ ಭಗೀರಥ ಎಂದು ಕರೆಸಿಕೊಳ್ಳುವ ಇಲ್ಲಿನ ಒಬ್ಬ ರಾಜಕಾರಣಿ ಮತ್ತು ಅವರ ಮಗನ ಜೇಬು ತುಂಬುತ್ತಿದೆ ಎಂದು ಯಾರ ಹೆಸರನ್ನೂ ಹೇಳದೆ ಆಪಾದಿಸಿದರು.
ಜನತಾ ಜಲಧಾರೆ ಕಾರ್ಯಕ್ರಮ ಬಳಿಕ ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತೇನೆ. ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮುಗ್ಧ ಮನಸ್ಸಿನ ವ್ಯಕ್ತಿ. ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಡಿ, ನಾನು ಅವರನ್ನು ಮಂತ್ರಿ ಮಾಡಿ ಕಳುಹಿಸುತ್ತೇನೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹೀಂ ಮಾತನಾಡಿ, ನದಿ ನೀರನ್ನು ನೀರಿನ ಕೊರತೆ ಇರುವ ಕಡೆ ಹರಿಸುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಂಕಲ್ಪ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಕುರ್ಚಿ ಚಿಂತೆ. ಪರ್ಸೆಂಟೇಜ್ ವಿಷಯದಲ್ಲಿ ಕಾಂಗ್ರೆಸ್ ಸಾಚಾ ಅಲ್ಲ. ದೇವೇಗೌಡರ ಪ್ರಾಮಾಣಿಕತೆ ಇಂದಿನ ರಾಜಕಾರಣಿಗಳಲ್ಲಿ ಅಪರೂಪ. ಆದ್ದರಿಂದಲೇ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಕ್ಷೇತ್ರದ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. 10 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಒಂದು ಕೃಷಿ ಕೊಳವೆ ಬಾವಿಯೂ ಮಂಜೂರು ಮಾಡಿಸಿಲ್ಲ. ಡಿಸಿಸಿ ಬ್ಯಾಂಕ್ ಮೂಲಕ ಸಾಲ ಕೊಡಿಸಿ, ತಮ್ಮ ಜೇಬಿನಿಂದ ಕೊಟ್ಟಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಶ್ರೀನಿವಾಸ್, ಗಣೇಶ್, ನಂಜುಂಡಪ್ಪ, ಮುಖಂಡರಾದ ರಾಮೇಗೌಡ, ಡಾ. ಮುಸ್ತಫಾ, ಲಲಿತಾ ಶ್ರೀನಿವಾಸ್, ಆಯಿಷಾ ನಯಾಜ್, ಶಬರೀಶ್, ರಾಜಣ್ಣ, ಬೈಯ್ಯಾರಿಡ್ಡಿ, ಪೂಲ ಶಿವಾರೆಡ್ಡಿ ಮತ್ತಿತರರು ಇದ್ದರು.
ಮೆರವಣಿಗೆ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನತಾ ಜಲಧಾರೆ ರಥ ಮೆರವಣಿಗೆ ನಡೆಸಲಾಯಿತು. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖಂಡರೊಂದಿಗೆ ರೋಡ್ ಷೋ ನಡೆಸಿದರು. ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು.