ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಜನತಾ ಜಲಧಾರೆ ಕಾರ್ಯಕ್ರಮದ ಯಶಸ್ಸಿಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾಂಘಿಕ ಪ್ರಯತ್ನ ನಡೆಸಬೇಕು ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಏ.25 ರಂದು ಬೆಳಿಗ್ಗೆ 11.30ಕ್ಕೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜನತಾ ಜಲಧಾರೆ ರಥ ಮೆರವಣಿಗೆ ಏರ್ಪಡಿಸಲಾಗಿದೆ. ಮೆರವಣಿಗೆ ಬಳಿಕ ಪಟ್ಟಣದ ಕನಕ ಭವನದ ಸಮೀಪ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ, ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಭೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.
ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಬೆಂಬಲಿಸಿದಲ್ಲಿ, ಬಾಯಾರಿದ ಜಿಲ್ಲೆಗಳಿಗೆ ನೀರು ಕೊಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜನರನ್ನು ಪಕ್ಷಾತೀತವಾಗಿ ಒಗ್ಗೂಟಿಸುವ ಕೆಲಸ ಮಾಡಬೇಕಾಗಿದೆ. ಒಂದು ಮಹತ್ತರವಾದ ಯೋಜನೆ ಜಾರಿಗೆ ಬರಬೇಕಾದರೆ ಸಮಾಜದ ಎಲ್ಲ ವರ್ಗದ ಜನರ ಸಹಕಾರ ಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆಯ ಮಾಜಿ ಸದಸ್ಯ ರವಿ, ಮುಖಂಡರಾದ ಪೂಲ ಶಿವಾರೆಡ್ಡಿ, ವೇಣುಗೋಪಾಲರೆಡ್ಡಿ, ಗಾಯತ್ರಿ ಇದ್ದರು