ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೇಂದ್ರ ಸರ್ಕಾರ ಆದಿ ಜಾಂಭವಂತಸ್ವಾಮಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಿಸಬೇಕು ಎಂದು ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಆಗ್ರಹಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆದಿ ಜಾಂಭವಂತಸ್ವಾಮಿ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆದಿ ಜಾಂಭವಂತಸ್ವಾಮಿ ತಮ್ಮ ಹಿರಿತನ ಹಾಗೂ ಸಮದೃಷ್ಟಿಯಿಂದ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸ್ಮರಣೆಯಿಂದ ಮಾನವ ಇತಿಹಾಸದ ದರ್ಶನವಾಗುತ್ತದೆ ಎಂದು ಹೇಳಿದರು.
ಸರ್ಕಾರ ಮಾದಿಗ ದಂಡೋರ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕು. ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈಗಾಗಲೆ ಅತ್ಯಂತ ಹಿಂದುಳಿದಿರುವ ಈ ಸಮುದಾಯ ಇನ್ನಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾಮು ಮಾತನಾಡಿ, ಮಾದಿಗ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಪ್ರೋತ್ಸಾಹ ನೀಡಬೇಕು. ಶಿಕ್ಷಣ ಇಲ್ಲದೆ ಸಂಘಟನೆ ಹಾಗೂ ಹೋರಾಟ ಸಾಧ್ಯವಾಗುವುದಿಲ್ಲ. ಇದನ್ನು ಸಮುದಾಯದ ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.
ಸಂಘಟನೆಯ ಮುಖಂಡರಾದ ಆರ್.ಬಿ.ನರಸಿಂಹಣ್ಣ, ರಘುನಾಥ, ಸಿ.ಎಂ.ಲಕ್ಷ್ಮಣ್, ನಾಗೇಶ್, ನಾಗರಾಜ್, ಶ್ರೀನಿವಾಸ್, ಮುನಿರಾಜು, ರವೀಂದ್ರ, ಚಂದ್ರಪ್ಪ, ಜೆ.ಶಂಕರ್, ರವಿಕುಮಾರ್, ಸುರೇಶ್, ಕೆ.ವೆಂಕಟೇಶ್, ಶಿವಮ್ಮ, ಮಂಜುಳ, ಸರಸ್ವತಮ್ಮ ಇದ್ದರು.