ಶ್ರೀನಿವಾಸಪುರ : ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಬಿಸಿಊಟ, ಸಮವಸ್ತ್ರ, ಉಚಿತ ಪುಸ್ತಕಗಳು ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಸಹ ಸರ್ಕಾರಿ ಶಾಲೆಗಳನ್ನು ಉಳಿಸಲು ಅನೇಕ ರೂಪರೇಷಗಳನ್ನು ಹಮ್ಮಿಕೊಂಡಿದೆ. ಆದರೂ ಸರ್ಕಾರಿ ಶಾಲೆಗಳೆಂದರೆ ಮಕ್ಕಳ ಪೋಷಕರಲ್ಲಿ ಒಂದು ರೀತಿಯಲ್ಲಿ ನಿರುತ್ಸಾಹ.
ಇಂತಹ ಸಂದರ್ಭದಲ್ಲಿ ತಾಲೂಕಿನ ಜೆ.ತಿಮ್ಮಸಂದ್ರ ಗ್ರಾ.ಪಂ.ವ್ಯಾಪ್ತಿಯ ಕಿರುವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಜಿ.ಪಂ ಅನುದಾನದಲ್ಲಿ ಸುಮಾರು 14 ಲಕ್ಷ ಅಂದಾಜು ಮೊತ್ತ ಕಾಮಗಾರಿಗೆ ಸರ್ಕಾರವು ಅನುದಾನವು ಬಿಡುಗಡೆ ಮಾಡಿದೆ.
ಕಿರುವಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7 ತರಗತಿಯ ವರೆಗೂ ಇದ್ದು ಅದರಲ್ಲಿ ಒಟ್ಟು 16 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸರ್ಕಾರವು ಒಂದು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಆ ಕೊಠಡಿಯ ಪ್ರಾರಂಭ ಹಂತದಲ್ಲಿಯೇ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಪೋಷಕರು ತಮ್ಮ ಮಕ್ಕಳ ಬಗ್ಗೆ ಅನೇಕ ಕನಸನ್ನು ಕಂಡಿದ್ದು ತಮ್ಮ ಮಕ್ಕಳ ಜೀವದ ಜೊತೆ ಚಲ್ಲಾಟವಾಡುವ ರೀತಿಯಲ್ಲಿ ಗುತ್ತಿಗೆದಾರ ಶಾಲಾ ಕಟ್ಟಡವನ್ನು ಪ್ರಾರಂಭದ ಹಂತದಲ್ಲಿಯೇ ಕಳಪೆ ಕಾಮಗಾರಿಯನ್ನು ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಾದ ಮುನಿಸ್ವಾಮಿ, ಕೆ.ಐ. ನಾರಾಯಣಸ್ವಾಮಿ, ಕೆ.ಎಂ.ನರಸಿಂಹಯ್ಯ, ಕೆ.ಎಲ್.ಅರುಣ್ಕುಮಾರ್, ಕೆ.ಎನ್.ಮಂಜುನಾಥ, ಕೆ.ಟಿ.ಶ್ರೀನಿವಾಸ್, ಸುರೇಶ್, ಕೆ.ಎನ್.ಕೃಷ್ಣಪ್ಪ, ಕೆ.ಎನ್.ವೆಂಕಟರಮಣ ಮುಂತಾದವರು ಆರೋಪ ಮಾಡುತ್ತಿದ್ದಾರೆ