ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಅರ್ಹ ಬಡವರನ್ನು ಹುಡುಕಿ ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಿ ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಮೂಲಕ ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೋಗಲಾಡುಸುವ ಸಂಕಲ್ಪ ನನ್ನದಾಗಿದೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ತಿಳಿಸಿದರು.
ಕೆಜಿಎಫ್ ತಾಲ್ಲೂಕಿನ ಪಾರಂಡಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ ಮಹಿಳೆಯರು,ರೈತರಿಗೆ 70 ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಸಾಲ ಉಳ್ಳವರಿಗೆ ಸಿಕ್ಕರೆ ಪ್ರಯೋಜನವಿಲ್ಲ, ಅರ್ಹ ಬಡ ಫಲಾನುಭವಿಗಳಿಗೆ ಸಾಲ ಸಿಕ್ಕರೆ ಅವರು ಆರ್ಥಿಕವಾಗಿ ಸ್ವಾವಲಂಬಿ ಬದುಕಿಗೆ ದಾರಿ ಕಂಡುಕೊಳ್ಳುತ್ತಾರೆ, ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಬಡರೈತರು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ನೀಡುವ ಸದುದ್ದೇಶ ಹೊಂದಿದೆ, ಕೆಜಿಎಫ್ ತಾಲ್ಲೂಕಿನ ಎಲ್ಲಾ ಬಡ ಕುಟುಂಬಗಳು ಇದರ ಪ್ರಯೋಜನ ಪಡೆಯಬೇಕು, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಮತ್ತಷ್ಟು ಮಂದಿಗೆ ಸಾಲ ಸಿಗುವಂತೆ ಮಾಡಬೇಕು ಎಂದರು.
ಕೆಜಿಎಫ್ ತಾಲ್ಲೂಕು ತಮಿಳುನಾಡು ಗಡಿಗೆ ಹೊಂದಿಕೊಂಡಿದೆ, ಇಲ್ಲಿ ಮೀಟರ್ ಬಡ್ಡಿ ದಂಧೆ ಹಿಂದಿನಿಂದಲೂ ಇತ್ತು, ಇದನ್ನು ಕೊನೆಗಾಣಿಸಿ, ಡಿಸಿಸಿ ಬ್ಯಾಂಕಿನಿಂದ ಬಡ್ಡಿರಹಿತ ಸಾಲ ಒದಗಿಸಿ ತಾಯಂದಿರ ಬದುಕಿಗೆ ದಾರಿ ತೋರುವುದೇ ನನ್ನ ಧ್ಯೇಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು ಮಾತನಾಡಿ, ಕೆಜಿಎಫ್ ತಾಲ್ಲೂಕಿನ ರೂಪಕಲಾ ಅವರು ಶಾಸಕರಾಗಿರುವುದು ಇಲ್ಲಿನ ಜನರ ಅದೃಷ್ಟವಾಗಿದೆ, ಬಡ ಜನತೆಗೆ ಹತ್ತಿರವಾಗಿರುವ ಅವರು, ಜನರ ಜತೆ ಬೆರೆಯುವ ಮೂಲಕ ಅವರಲ್ಲಿ ಒಬ್ಬರಾಗಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.
ಸರಳ ವ್ಯಕ್ತಿತ್ವದಿಂದ ಬಡ ಹೆಣ್ಣು ಮಕ್ಕಳಿಗೆ ಹತ್ತಿರವಾಗಿರುವ ಶಾಸಕರು, ಕಷ್ಟದಲ್ಲಿರುವ ಹೆಣ್ಣುಮಕ್ಕಳನ್ನು ಹುಡುಕಿ ಅರ್ಹರಿಗೆ ಸಾಲ ಒದಗಿಸುತ್ತಿದ್ದಾರೆ, ಇವರ ಈ ಕಾರ್ಯ ಇತರರಿಗೆ ಆದರ್ಶವಾಗಿದೆ, ಡಿಸಿಸಿ ಬ್ಯಾಂಕ್ ಮೂಲಕ ಅವರು ಕೆಜಿಎಫ್ ಕ್ಷೇತ್ರದಲ್ಲಿ ರಾಜಕೀಯವಾಗಿ ಮತ್ತಷ್ಟು ಭದ್ರಗೊಳ್ಳಲಿ ಎಂದು ಆಶಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷತೆ ವಹಿಸಿದ್ದು, ಸೊಸೈಟಿ ದಿವಾಳಿಯಾಗಿ ಸತ್ತುಹೋಗಿತ್ತು, ಆಗ ಅನೇಕ ಬಡವರು,ರೈತರು ಸಾಲ ಸಿಗದೇ ವಂಚಿತರಾದರು. ಹತ್ತು ವರ್ಷಗಳ ಹಿಂದಿನ ಈ ಸತ್ಯವನ್ನು ಸದಾ ಸ್ಮರಿಸಿಕೊಳ್ಳಿ, ಮತ್ತೆ ಸೊಸೈಟಿ ನಷ್ಟಕ್ಕೆ ಹೋಗಲು ಬಿಡದೇ ಬಡವರ ದೇವಾಲಯವಾಗಿ ಮುನ್ನಡೆಸಿ ಎಂದು ಕಿವಿಮಾತು ಹೇಳಿದರು.
ಸೊಸೈಟಿಗಳು ಪಡಿತರ ವಿತರಣೆಗೆ ಸೀಮಿತವಾಗಿತ್ತು, ಈಗ ಕೋಟಿಗಟ್ಟಲೇ ಸಾಲ ವಿತರಿಸುವ ಮೂಲಕ ವರ್ಷವಿಡೀ ರೈತರು,ಮಹಿಳೆಯರು ಸೊಸೈಟಿಗಳತ್ತ ಬರುವಂತಹ ವಾತಾವರಣ ಸೃಷ್ಟಿಯಾಗಿದೆ, ಬಂದವರೊಂದಿಗೆ ಸೌಜನ್ಯದಿಂದ ವರ್ತಿಸಿ, ಸಾಲ ನೀಡುವುದು ಮಾತ್ರವಲ್ಲ ಅವರ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್ ಅಥವಾ ಸೊಸೈಟಿಯಲ್ಲಿ ಉಳಿತಾಯ ಮಾಡಲು ನಂಬಿಕೆ ಮೂಡಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ, ವಕೀಲರಾದ ಪದ್ಮನಾಭರೆಡ್ಡಿ, ಎಂ.ಬಿ.ಎ.ಕೃಷ್ಣ, ತೇನ್‍ಮೌಳಿ, ಎನ್‍ಟಿಆರ್, ಸುರೇಂದ್ರಗೌಡ ಮತ್ತಿತರರಿದ್ದರು.