
ವಿ. ಮೋಹನ್ ರಾವ್ ಅವರ “ಟೆಸ್ಟಿಂಗ್ ಟೈಮ್ಸ್ ಫಾರ್ ಇಂಡಿಯನ್ ಇಕಾನಮಿ” ಪುಸ್ತಕ ಬಿಡುಗಡೆ

ಕುಂದಾಪುರ: “ಪ್ರತಿಯೊಬ್ಬ ಪ್ರಜೆ, ದೇಶದ ಆರ್ಥಿಕ, ಸಾಮಾಜಿಕ , ರಾಜಕೀಯ ವಿಚಾರಗಳ ಬಗ್ಗೆ ಮಾಹಿತಿ ಹೊಂದಿ, ಜಾಗೃತನಾದಾಗ, ಪ್ರಶ್ನೆ ಮಾಡಲು ಕಲಿತಾಗ, ಸತ್ಯ ಹೇಳುವ ಧೈರ್ಯ ಮಾಡಿದಾಗ, ದೇಶ ಸ್ವಚ್ಛ ಭಾರತ, ಸ್ವಸ್ಥ ಭಾರತ ಆಗಲು ಸಾಧ್ಯ. ಪ್ರಜೆಗಳು ತಿಳಿಯುವ ಆಸಕ್ತಿ ತೋರದಿದ್ದಾಗ, ತಿಳಿದೂ ನಿರ್ಲಕ್ಷ ವಹಿಸಿದಾಗ ಸಮಸ್ಯೆ ಉಂಟಾಗುತ್ತದೆ. ಭ್ರಷ್ಟಾಚಾರ ನಡೆದಾಗ ಜನ ಪ್ರಶ್ನೆ ಮಾಡದಿದ್ದರೆ ನಷ್ಟ ಆಗುವುದು ಜನರಿಗೆ. ಹೆಚ್ಚಿನ ತೆರಿಗೆ ಜನರು ಕಟ್ಟುವ ಪರಿಸ್ಥಿತಿ ಬರುತ್ತದೆ” ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ರಾಧಾಬಾಯಿ ರಮಣ ಪ್ರಭು ಸಭಾಂಗಣದಲ್ಲಿ ವಿ. ಮೋಹನ್ ರಾವ್ ಅವರ “ಟೆಸ್ಟಿಂಗ್ ಟೈಮ್ಸ್ ಫಾರ್ ಇಂಡಿಯನ್ ಇಕಾನಮಿ” ಎನ್ನು ಪುಸ್ತಕ ಬಿಡುಗಡೆ ಮಾಡುತ್ತಾ ಅವರು ಹೇಳಿದರು.
“ವಿ. ಮೋಹನ್ ರಾವ್ ಅವರ ಪುಸ್ತಕ ದೇಶದ ಆರ್ಥಿಕ ವಿಚಾರಗಳ ಕುರಿತು ಹಲವು ಉಪಯುಕ್ತ ಮಾಹಿತಿ ನೀಡುತ್ತಿದೆ. ಈ ಬಗ್ಗೆ ವಿಚಾರ ವಿನಿಮಯಗಳು ನಡೆಯಬೇಕು. ಶಾಸಕಾಂಗದಲ್ಲಿರುವವರ ಜನೋಪಯೋಗಿ ಚಿಂತನೆಗಳನ್ನು ಕಾರ್ಯಾಂಗದವರು ಕಾರ್ಯಗತಗೊಳಿಸುವ ವ್ಯವಸ್ಥೆಯಿಂದ ಮಾತ್ರ ಉತ್ತಮ ಕಾರ್ಯ ಆಗಲು ಸಾಧ್ಯ. ಸಂಬಂಧಪಟ್ಟವರು ಇಂತಹ ಉತ್ತಮ ಪುಸ್ತಕಗಳ ಅಧ್ಯಯನ ಮಾಡಬೇಕು” ಎಂದು ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ಪಟ್ಟರು.
ಭಂಡಾರ್‍ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಲೆಕ್ಕ ಪರಿಶೋಧಕ ಟಿ. ಕೃಷ್ಣರಾಯ ಶ್ಯಾನುಭಾಗ ಕೃತಿಯ ಬಗ್ಗೆ ಮಾತನಾಡಿ “ವಿ. ಮೋಹನ್ ರಾವ್ ತಮ್ಮ ಕೃತಿಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯ ಎಲ್ಲ ಮಜಲುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಧ್ಯಯನ ಮಾಡಿ ಬರೆದಿರುವುದು ತಿಳಿಯುತ್ತದೆ. ಇವರು ಅಭಿನಂದನೀಯರು ಇದು ಸಂಗ್ರಾಹಯೋಗ್ಯ ಪುಸ್ತಕ. ಕರೋನಾ ಸಮಸ್ಯೆ ನಡುವೆಯೂ ದೇಶಕ್ಕೆ ಆರ್ಥಿಕ ದೃಢತೆ ನೀಡುವಲ್ಲಿ ಸರಕಾರ ಬಹಳ ಶ್ರಮ ಪಟ್ಟಿದೆ ಎಂದರು.
ಮುಖ್ಯ ಅತಿಥಿ ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಡೆಪ್ಯೂಟಿ ಜನರಲ್ ಮೆನೇಜರ್ ಸುಜೀಶ್ ಪ್ರಭಾಕರ್ ಶುಭ ಹಾರೈಸಿ ವಿ. ಮೋಹನ್ ರಾವ್ ಪ್ರಕಟಿಸಿದ ಎರಡೂ ಕೃತಿಗಳು ದೇಶದ ಅರ್ಥ ವ್ಯವಸ್ಥೆಯ ಕನ್ನಡಿಯಂತಿವೆ ಎಂದರು.
ಸದರ್ನ್ ಇಕಾನಾಮಿಸ್ಟ್ ಬೆಂಗಳೂರು ಹಾಗೂ “ಕುಂದಪ್ರಭ” ಆಶ್ರಯದಲ್ಲಿ ನಡೆದ ಈ ಸಮಾರಂಭದಲ್ಲಿ ಲೇಖಕ ವಿ. ಮೋಹನ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಹ. ಸೋಮಶೇಖರ ಶೆಟ್ಟಿ ವಂದಿಸಿದರು.