ಗರ್ಭಿಣಿ ಮತ್ತು ಬಾಣಾಂತಿಯರಿಗೆ ಅಪೌಷ್ಠಿಕತೆ ನಿವಾರಿಸಲು ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿರುವುದು ಶ್ಲಾಘನೀಯ:ವಿಜಯಮ್ಮ

ಶ್ರೀನಿವಾಸಪುರ ; ಗರ್ಭಿಣಿ ಮತ್ತು ಬಾಣಾಂತಿಯರಿಗೆ ಅಪೌಷ್ಠಿಕತೆ ನಿವಾರಿಸಲು ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿರುವುದು ಶ್ಲಾಘನೀಯ ಅದೇ ರೀತಿ ಮಕ್ಕಳ ಬೆಳೆವಣಿಗೆಗೂ ತಮ್ಮ ಸೇವೆ ಪ್ರಾಮಾಣಿಕವಾಗಿ ಮಾಡಿದರೆ ಸಾರ್ಥಕತೆ ಹೆಚ್ಚುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವಿಜಯಮ್ಮ ಹೇಳಿದರು.
ಶ್ರೀನಿವಾಸಪುರ ವೃತ್ತ ಅಂಗನವಾಡಿ ಕಾರ್ಯಕರ್ತರು ಪಟ್ಟಣದ ರಂಗಾರಸ್ತೆ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನೆ ಶ್ರೀನಿವಾಸಪುರ ಇವರ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪೋಷಣ್ ಅಭಿಯಾನ ಅನ್ನುವುದು ಕೇವಲ ಒಂದು ತಿಂಗಳಿಗೆ ಸೀಮಿತವಾಗಬಾರದು ನಿರಂತರವಾಗಿ ಗರ್ಭಿಣಿ ಮತ್ತು ಬಾಣಾಂತಿಯರ ಆರೋಗ್ಯ ರಕ್ಷಣೆಗೆ ಅಂಗನವಾಡಿಗಳನ್ನು ಸ್ಥಾಪಿಸಿರುವ ಹಿನ್ನಲೆಯಲ್ಲಿ ಅವರ ರಕ್ಷಣೆಯೇ ಕಾರ್ಯಕರ್ತರ ಮುಖ್ಯ ಧ್ಯೇಯವಾಗಬೇಕು. ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಿಸಲು ತಾವು ಮಾಡುತ್ತಿರುವ ಕೆಲಸವನ್ನು ಇನ್ನಷ್ಟು ಗಟ್ಟಿಗೊಳಿಸಿದಾಗ ಮಕ್ಕಳ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಅಂಗನವಾಡಿ ಕಾರ್ಯಕರ್ತರು ಮಾಡಬೇಕಾಗಿದೆ ಅದೇ ರೀತಿ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ತಾಯಿ ಕಾರ್ಡ್‍ನ್ನು ಗಮನಿಸಿ ಕಾಲ-ಕಾಲಕ್ಕೆ ಲಸಿಕೆಗಳನ್ನು ಹಾಕಿಸಿಕೊಳ್ಳಲು ಸಲಹೆ ನೀಡಬೇಕು ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜೊತೆಗೂಡಿ ಕೆಲಸ ಮಾಡಿದಾಗ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಬಹುದು, ಈಗಾಗಲೆ ಹಲವಾರು ಭಯಾನಕ ರೋಗಗಳನ್ನು ತಡೆಗಟ್ಟುವಲ್ಲಿ ಇಲಾಖೆಗಳು ಯಶಸ್ವಿಯಾಗಿದೆ ಎಂದು ತಿಳಿಸಿದರು.
ರಂಗಾರಸ್ತೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಆದಿಲಕ್ಷ್ಮಮ್ಮ ಮಾತನಾಡಿ ಗರ್ಭಿಣಿಯರು ಉತ್ತಮ ಪೋಷಕಾಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು ಆದ್ದರಿಂದ ಪ್ರತಿ ತರಕಾರಿಯಲ್ಲೂ ಪೋಷಕಾಂಶಗಳು ಇರುವುದರಿಂದ ಎಲ್ಲ ಹಸಿರು ತರಕಾರಿಗಳನ್ನು ಸೇವಿಸುವುದು ಉತ್ತಮ ಎಂದು ತಿಳಿಸಿದರು.
ಗರ್ಭಿಣಿ ಮಹಿಳೆಯರಿಗೆ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಸೀಮಂತ ಕಾರ್ಯಕ್ರಮ ನಡೆಸಲಾಯಿತು ಮತ್ತು ಮಕ್ಕಳಿಗೆ ಅನ್ನಪ್ರಾಸನವನ್ನು ಆರೋಗ್ಯಾಧಿಕಾರಿ ನಡೆಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್, ಹಿರಿಯ ಮೇಲ್ವಿಚಾರಕಿ ಶರಣಮ್ಮ, ಆರೋಗ್ಯ ನಿರಿಕ್ಷಣಾಧಿಕಾರಿ ನಾಗಮಣಿ, ಬಾಲವಿಕಾಸ ಸಲಹಾ ಸಮಿತಿ ಸದಸ್ಯರಾದ ಅನ್ನಪೂರ್ಣಮ್ಮ, ರಾಜೇಶ್ವರಮ್ಮ, ಶ್ರೀನಿವಾಸಪುರ ವೃತ್ತ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.