ಭೂಮಿಯಲ್ಲಿ ತೇವಾಂಶದ ಕೊರತೆ ಎದುರಿಸುತ್ತಿರುವ ರೈತರು ಮಾವಿಗೆ ಬದಲಿಗೆ ಗೋಡಂಬಿ ಬೆಳೆಯುವುದು ಸೂಕ್ತ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಭೂಮಿಯಲ್ಲಿ ತೇವಾಂಶದ ಕೊರತೆ ಎದುರಿಸುತ್ತಿರುವ ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯುವುದು ಸೂಕ್ತ ಎಂದು ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಹೇಳಿದರು.
ತಾಲ್ಲೂಕಿನ ಶ್ಯಾಗತ್ತೂರು ಗ್ರಾಮದಲ್ಲಿ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆ ವತಿಯಿಂದ, ಗೇರು ಬೆಳೆಯಲ್ಲಿ ಅಧಿಕ ಇಳುವರಿಗಾಗಿ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು ಎಂಬ ವಿಷಯ ಕುರಿತು ಶುಕ್ರವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು
.
ದೇಶದ ಬೇಡಿಕೆಯ ಅರ್ಧದಷ್ಟು ಗೋಡಂಬಿಯನ್ನು ಮಾತ್ರ ಉತ್ಪಾದಿಸಲಾಗುತ್ತಿದೆ. ಉಳಿದಂತೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಗೊಂಡಂಬಿಗೆ ವಿಶ್ವವ್ಯಾಪಿ ಬೇಡಿಕೆ ಇರುವುದರಿಂದ ನಷ್ಟದ ಸಮಸ್ಯೆ ಉಂಟಾಗುವುದಿಲ್ಲ. ಅಪರೂಪಕ್ಕೆ ಬೆಲೆಯಲ್ಲಿ ತುಸು ಕಡಿಮೆ ಆದಲ್ಲಿ ಗೇರು ಬೀಜವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ದಾಸ್ತಾನು ಮಾಡಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ ಎಂದು ಹೇಳಿದರು.
ಗೋಡಂಬಿ ಬೆಳೆಯಲ್ಲಿ ಸಸ್ಯಾಭಿವೃದ್ಧಿ ವಿಧಾನಗಳು, ಸಂಕರಣ ತಳಿಗಳ ಪರಿಚಯ ಮತ್ತು ಮೈದಾನ ಪ್ರದೇಶಕ್ಕೆ ಸೂಕ್ತವಾದ ತಳಿಗಳು ಎಂಬ ವಿಷಯ ಕುರಿತು ವಿಷಯ ತಜ್ಞರಾದ ಡಾ. ವಿಷ್ಟುವರ್ಧನ, ಡಾ. ಆರ್.ಕೆ.ರಾಮಚಂದ್ರ ಮಾತನಾಡಿದರು. ಗೋಡಂಬಿ ಬೆಳೆಯ ಸಮಗ್ರ ಬೇಸಾಯ ತಂತ್ರಜ್ಞಾನ ಕುರಿತು ಬಿ.ಎನ್.ರಾಜೇಂದ್ರ, ಗೋಡಂಬಿ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಬಗ್ಗೆ ಡಾ. ಬಿ.ಆಂಜನೇಯರೆಡ್ಡಿ, ಗೋಡಂಬಿ ಬೆಳೆಯ ಕೊಯ್ಲೋತ್ತರ ತಂತ್ರಜ್ಞಾನಗಳು ಎಂಬ ವಿಷಯ ಕುರಿತು ಎಂ.ರಮೇಶ್, ಗೋಡಂಬಿ ಬೆಳೆಯ ಸಂರಕ್ಷಣೆ ಮತ್ತು ಮಾರುಕಟ್ಟೆ ಬಗ್ಗೆ ಬಿ.ಎನ್.ರಾಜೇಂದ್ರ, ಡಾ. ಬಿ.ಸುಬ್ರಮಣ್ಯಂ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ವಿವೇಕಾನಂದ, ಪ್ರಗತಿಪರ ರೈತರಾದ ಎನ್.ಬಚ್ಚೇಗೌಡ, ಕೃಷ್ಣೇಗೌಡ, ಸುಧಾಕರ್, ಮೋಹನ್, ಮುನಿವೆಂಕಟಪ್ಪ, ಎಸ್.ಆರ್.ಲಕ್ಷ್ಮೀನಾರಾಯಣರೆಡ್ಡಿ, ಎಸ್.ಎಚ್.ನಾರಾಯಣರೆಡ್ಡಿ, ಚಾನ್‍ಪಾಷ, ಸುಬ್ಬಮ್ಮ ಇದ್ದರು.