ಕೋಲಾರ, ಮೇ.22: ಗ್ರಾ.ಪಂಗಳಲ್ಲಿ ಕಸ ವಿಲೇವಾರಿ ಮಾಡುವ ವಾಹನ ಚಾಲನಾ ವೃತ್ತಿಯು ಅತ್ಯಂತ ಶ್ರೇಷ್ಠವಾದದ್ದು ಹಾಗೂ ಯಾವುದೇ ವೃತ್ತಿ ಹೆಚ್ಚು ಮತ್ತು ಕಡಿಮೆ ಎಂದು ವಿಂಗಡಿಸಲು ಸಾಧ್ಯವಿಲ್ಲ ಎಂದು ಜಿ.ಪಂ ಯೋಜನಾ ನಿರ್ದೇಶಕ ರವಿಚಂದ್ರ .ಎನ್ ಹೇಳಿದರು.
ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘುವಾಹನ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವಾಹನಾ ಚಾಲನಾ ಪರವಾನಗಿ ವಿತರಿಸಿ ಮಾತನಾಡಿದರು.
ರಾಜ್ಯದ ಪ್ರತಿ ಗ್ರಾ.ಪಂ.ಯ ಸ್ವಚ್ಚತಾ ವಾಹಿನಿಯನ್ನು ಚಲಾಯಿಸುವ ವೃತ್ತಿಯನ್ನು ಮಹಿಳೆಯರಿಗೆ ಸರ್ಕಾರ ಮೀಸಲಿರಿಸಿದೆ. ಇದರಿಂದ ಮಹಿಳೆಯರಿಗೂ ಉದ್ಯೋಗ ದೊರಕಿ, ಸ್ವಾವಲಂಭಿ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದರು.
ಪ್ರತಿ ಹಳ್ಳಿಗೂ ತೆರಳಿ ಕಸ ಸಂಗ್ರಹಿಸಿ, ಅದನ್ನು ನಿಗದಿಪಡಿಸಿದ ಜಾಗದಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿ ಸ್ವಚ್ಛತಾ ವಾಹಿನಿಯ ಚಾಲಕಿಯರ ಮೇಲಿರುತ್ತದೆ. ಮುಂದಿನ ದಿನಗಳಲ್ಲಿ ಸ್ವಚ್ಛತಾ ವಾಹನ ಚಾಲಕಿಯರಿಗೆ ಸಾಕಷ್ಟು ಅನುಕೂಲಗಳು ಸಿಗಲಿದೆ ಎಂದು ಹೇಳಿದರು.
ಪೈಲಟ್ ವೃತ್ತಿಯಿಂದ ಹಿಡಿದು ದೇಶದ ರಾಷ್ಟ್ರಪತಿ ಹುದ್ದೆಯವರೆಗೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಸಾಧಿಸಬೇಕೆಂಬ ಛಲವಿದ್ದರೆ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡಬಹುದು ಎಂದು ತಿಳಿಸಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ಯಲ್ಲೇಶ್.ಸಿ ಮಾತನಾಡಿ, ವಾಹನಾ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳು ಯಾವುದೇ ಕಾರಣಕ್ಕೂ ಕೀಳರಿಮೆ ಪಡದೆ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಹೆಸರು ಸಂಪಾದಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ವೃತ್ತಿಯು ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ವಾಹನಾ ಚಲಾಯಿಸುವಾಗ ಭಯ ಹಾಗೂ ಒತ್ತಡವನ್ನು ಬಿಟ್ಟು ಅತ್ಯಂತ ಎಚ್ಚರಿಕೆಯಿಂದ ಚಲಾಯಿಸಿದಾಗ ಮಾತ್ರ ಸುರಕ್ಷಿತವಾಗಿ ವೃತ್ತಿ ನಿರ್ವಹಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ತರಬೇತುದಾರರಾದ ಕೆ.ವಿ ವಿಜಯ್ ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ಅರ್ಪಿತ ಯು.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘು ವಾಹನಾ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಜಿ.ಪಂ ಯೋಜನಾ ನಿರ್ದೇಶಕ ರವಿಚಂದ್ರ .ಎನ್ ಚಾಲನಾ ಪರವಾನಗಿ ವಿತರಿಸಿದರು.