JANANUDI.COM NETWORK
ಕೆಂಪು ಕೋಟೆ ಮೇಲೆ ಕೇಸರಿ ಧ್ವಜಹಾರಿಸುತ್ತೇವೆ ಹೇಳಿಕೆ ಕುರಿತಂತೆ ತಾರಕ್ಕೇರಿರುವ ವಿವಾದದ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈಶ್ವರಪ್ಪನವರಿಗೆ ಛೀಮಾರಿ ಹಾಕಿದ್ದಾರೆ.
ರಾಜ್ಯದಲ್ಲಿ ಸದ್ಯ ಎರಡು ವಿಚಾರ ವಿಚಾಗಳಾದ ಹಿಜಾಬ್ ಮತ್ತು ಈಶ್ವರಪ್ಪನವರ ಕೇಸರಿ ಧ್ವಜ ಹೇಳಿಕೆ ಭಾರೀ ವಿವಾದದಕ್ಕೆ ಕಾರಣವಾಗಿದೆ. ಕೇಸರಿ ಧ್ವಜದ ಹೇಳಿಕೆ ಬಗ್ಗೆ ವಿವಾದವು ದೆಹಲಿಯ ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೆಂಪುಕೋಟೆ ಸೇರಿ ಎಲ್ಲಿ ಬೇಕಾದರೂ ಕೇಸರಿ ಧ್ವಜ (ಭಗವಾ ಧ್ವಜ)ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಕೆ.ಎಸ್.ಈಶ್ವರಪ್ಪನವರನ್ನು ಕಟುವಾಗಿ ಛೀಮಾರಿ ಹಾಕಿದ್ದೇವೆ ಎಂದು ಹೇಳಿದ್ದಾರೆ.
ಇಂಡಿಯಾ ಟುಡೆ ಸಂದರ್ಶನದ ವೇಳೆ ಜೆ ಪಿ ನಡ್ಡಾ ಈ ಬಗ್ಗೆ ಮಾತನಾಡಿದ್ದು, ‘ನಾನು ಈಶ್ವರಪ್ಪ ಅವರಿಗೆ ಕರೆ ಮಾಡಿದ್ದು ಕೇಸರಿ ಧ್ವಜದ ಕುರಿತು ಅವರ ಹೇಳಿಕೆಯನ್ನು ಖಂಡಿಸಿ, ಎಚ್ಚರಿಕೆಯನ್ನು ನೀಡಿದ್ದೇನೆಂದು’ ಅವರು ತಿಳಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಜೆ ಪಿ ನಡ್ಡಾ, ಈಶ್ವರಪ್ಪ ಹೇಳಿಕೆಯನ್ನು ನಾನು ಒಪ್ಪಲ್ಲ. ನಾವು ಕಾನೂನು ರೀತಿಯಾಗಿ ನಡೆದುಕೊಳ್ಳುವವರು. ಸಂವಿಧಾನ ಒಪ್ಪುತ್ತೇವೆ. ಸಂವಿಧಾನವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ನಾವು ರಾಷ್ಟ್ರವಾದಿಗಳು ತಪ್ಪು ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅತ್ಯುತ್ಸಾಹದಲ್ಲಿ ಮಾತನಾಡಿ ಬಿಡುತ್ತಾರೆ. ಅವರು ನಮ್ಮ ಹಿರಿಯ ನಾಯಕ. ಆದರೂ ಅಂತಹ ಹೇಳಿಕೆಯನ್ನು ಕೊಡಬಾರದಿತ್ತು’ ಎಂದಿದ್ದಾರೆ.
ವಿವಾದಗಳು ಬುಗಿಲೆದ್ದ ಬೆನ್ನಲ್ಲೆ, ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ, ನಾವು ಭಗವಾಧ್ವಜವನ್ನು ಜಗತ್ತಿನ ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಮುಂದೊಂದು ದಿನ ಕೆಂಪುಕೋಟೆಯ ಮೇಲೆ ಕೂಡ ಹಾರಿಸುತ್ತೇವೆ. ಇನ್ನೂ 200-300 ವರ್ಷಗಳ ಬಳಿಕ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಿ ಬದಲಾವಣೆಯಾಗಬಹುದು ಎಂಬಿತ್ಯಾದಿ ಮಾತುಗಳನ್ನು ಆಡಿದ್ದರು.
ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈಶ್ವರಪ್ಪ ಹೇಳಿಕೆ ದೇಶದ್ರೋಹಿ ಹೇಳಿಕೆಯಾಗಿದ್ದು, ಕೂಡಲೇ ಅವರಿಂದ ರಾಜೀನಾಮೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ. ಅಲ್ಲದೆ, ವಿಧಾನಸಭೆ ಕಲಾಪ ವೇಳೆ ಅಹೋರಾತ್ರಿ ಧರಣಿ ಕೂಡ ನಡೆಸಿದೆ. ಆದರೂ, ಈಶ್ವರಪ್ಪ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ ಈಶ್ವರಪ್ಪನವರ ಮಾತುಗಳನ್ನು ಕೆಲವು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸದ್ಯಕ್ಕಂತೂ ಕೆ.ಎಸ್.ಈಶ್ವರಪ್ಪನವರು ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ನಮ್ಮ ರಾಜ್ಯ ನಾಯಕರು ಈಶ್ವರಪ್ಪನವರನ್ನು ರಕ್ಷಿಸಿಕೊಳ್ಳಲು ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಾ ತಮ್ಮ ನೈತಿಕ ಹೊಣೆಯನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ.