ರಾಜೀನಾಮೆ ನೀಡುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದ ಕೊನೆಗೂ  ಈಶ್ವರಪ್ಪ ರಾಜೀನಾಮೆ  ನೀಡಬೇಕಾಯ್ತು 

JANANNUDI.COM NETWORK

ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣ ಕೊನೆಗೂ ಕೆ.ಎಸ್​.ಈಶ್ವರಪ್ಪ ಅವರ ಮಂತ್ರಿ ಸ್ಥಾನಕ್ಕೆ ಕುತ್ತು ತಂದಿದೆ. ನನ್ನ ಸಾವಿಗೆ ಈಶ್ವರಪ್ಪ ಕಾರಣ. 40% ಕಮಿಷನ್​ ಕೊಡುವಂತೆ ಒತ್ತಾಯಿಸಿದ್ದರು ಎಂದು ನೇರ ಆರೋಪ ಮಾಡಿದ್ದ ಸಂತೋಷ್​ ಮಂಗಳವಾರ ಬೆಳಗ್ಗೆ ಉಡುಪಿಯ ಲಾಡ್ಜ್​ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.

   ಇದಕ್ಕೂ ಮುನ್ನ ವಾಟ್ಸ್‌ಆಯಪ್​ ಮೂಲಕ ಮಾಧ್ಯಮದವರಿಗೆ ಸಂದೇಶ ರವಾನಿಸಿದ್ದ ಸಂತೋಷ್​, ತಾನು ಸಾಯುತ್ತಿರುವುದಾಗಿ ಹಾಗೂ ಇದಕ್ಕೆ ಈಶ್ವರಪ್ಪ ಕಾರಣ ಎಂದೂ ದೂರಿದ್ದರು. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದ ಈಶ್ವರಪ್ಪ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ರಾಜ್ಯಅದ್ಯಂತ ಗುತ್ತಿಗೆದಾರರು ಕಮಿಷನ್ ಹಾವಳಿ ಇದೆ ಎಂದು ಹೇಳಿದರೂ, ಕುಟುಂಬದವರು ಸಂತೋಷ್ ಸಾವಿಗೆ ಈಶ್ವರಪ್ಪನವರೇ ನೇರ ಹೊಣೆ ಅಂದರೂ   ನಾನು ಯಾವ ತಪ್ಪನ್ನೂ ಮಾಡಿಲ್ಲ ರಾಜೀನಾಮೆ ನೀಡುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದರು.    

ಸಂತೋಷ್​ ಆತ್ಮಹತ್ಯೆ ಪ್ರಕರಣ ರಾಜ್ಯಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈಶ್ವರಪ್ಪನನ್ನು ಬಂಧಿಸಬೇಕು, ಮೃತನ ಕುಟುಂಬಕ್ಕೆ ಸರ್ಕಾರ 1 ಕೋಟಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್​ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ಇಂದೂ ಕೂಡ ಸಂತೋಷ್ ಶವ ಇಟ್ಟುಕೊಂಡು ಕಾಂಗ್ರೆಸ್​ ಪ್ರತಿಭಟನೆ ನಡೆಸಿತ್ತು. ಬೆಂಗಳೂರಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದ ತಂಡ, ವಿಧಾನಸೌಧ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿತ್ತು. ಇಷ್ಟಲ್ಲಾ ಬೆಳವಣಿಗೆ ಬಳಿಕ ಕೊನೆಗೂ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ.