ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ರೂ.4.50 ಕೋಟಿ ವೆಚ್ಚದ ಅಭಿವೃದ್ಧಿ ಟೆಂಡರ್ ಪ್ರಕ್ರಿಯೆ ಅವ್ಯವಹಾರ ಲೋಕಾಯುಕ್ತ ತನಿಖೆಗೆ ಒಳಪಡಿಸಿ : ಎನ್.ರಾಜೇಂದ್ರ ಪ್ರಸಾದ್

JANANUDI.COM NETWORK

ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ರೂ.4.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ನಡೆಯಲಾಗಿರುವ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎನ್.ರಾಜೇಂದ್ರ ಪ್ರಸಾದ್ ಆಗ್ರಹಿಸಿದರು.
ಎಪಿಎಂಸಿ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕೆ ರೂ.4.50 ಕೋಟಿ ವಿಶೇಷ ಅನುದಾನ ಮಂಜೂರಾಗಿತ್ತು. ಆದರೆ ಎಪಿಎಂಸಿ ಹಾಲಿ ಅಧ್ಯಕ್ಷ ಎಸ್.ಸಿ.ರಮೇಶ್ ಅವರ ಅವಧಿಯಲ್ಲಿ, ಆಡಳಿತ ಮಂಡಳಿ ನಿರ್ದೇಶಕರ ಗಮನಕ್ಕೆ ತರದೆ ಟೆಂಡರ್ ಕರೆದು ಶೇಕಡಾವಾರು ಹೆಚ್ಚು ನಮೂದಿಸಿರುವ ಗುತ್ತಿಗೆ ದಾರರ ಟೆಂಡರ್ ಅನುಮೋದಿಸಲಾಗಿದೆ ಎಂದು ಆಪಾದಿಸಿದರು.
ಎಪಿಎಂಸಿ ಪ್ರಾಂಗಣದಲ್ಲಿ ಎರಡು ನಿವೇಶನಗಳನ್ನು ಹಣ ಪಡೆದು ನೋಂದಾವಣೆ ಮಾಡಿಕೊಡಲಾಗಿದೆ. ಪ್ರಾಂಗಣದ ಮೂರು ಎಕರೆ ಜಮೀನನ್ನು ಕೆಲವರು ಒತ್ತುವತಿ ಮಾಡಿಕೊಂಡಿದ್ದರು. ನನ್ನ ಅವಧಿಯಲ್ಲಿ ಅವರನ್ನು ತೆರವುಗೊಳಿಸಲಾಗಿತ್ತು. ಆದರೆ ಈಗ ಒತ್ತುವರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವಿಷಯದಲ್ಲಿಯೂ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಮಗ್ರ ತನಿಖೆ ನಡೆಸಿ ಎಪಿಎಂಸಿ ಜಮೀನು ಉಳಿಸಬೇಕು. ಅಮೂಲ್ಯವಾದ ಜಮೀನು ಪ್ರಭಾವಿಗಳ ಪಾಲಾಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ವಿನಾಕಾರಣ ಎಪಿಎಂಸಿ ವ್ಯವಹಾರದಲ್ಲಿ ಅನಗತ್ಯವಾಗಿ ತಲೆ ಹಾಕುತ್ತಿದ್ದಾರೆ. ಹಾಲಿ ಅಧ್ಯಕ್ಷರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ, ನಂಬಿಕೆ ದ್ರೋಹದ ಆಪಾದನೆ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಎಂದು ಎಂದು ಹೇಳಿದರು.
ಮುಖಂಡರಾದ ಅಶೋಕರೆಡ್ಡಿ, ನಾರಾಯಣಸ್ವಾಮಿ, ಅಶೋಕ್ ಕುಮಾರ್, ಶ್ರೀನಿವಾಸರೆಡ್ಡಿ, ನಾರಾಯಣಸ್ವಾಮಿ ಇದ್ದರು.