ತಡವಾದ ಮುಂಗಾರಿಗೆ ಅಲ್ಪಾವಧಿ ಮತ್ತು ಬೆಂಕಿ ರೋಗ ನಿರೋಧಕರಾಗಿ ತಳಿ ಕೆ.ಎಂ.ಆರ್-316 ಕ್ಷೇತ್ರೋತ್ಸವ
ರಾಗಿ ನಮ್ಮ ರಾಜ್ಯದ ಮುಖ್ಯವಾದ ಖುಷ್ಕಿ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಅಸಮತೋಲನದಿಂದ ರಾಗಿ ಇಳುವರಿ ಕಡಿಮೆಯಾಗುತ್ತಿದ್ದು ಇದರ ಸಮಸ್ಯೆ ಪರ್ಯಾಯವಾಗಿ ನೂತನ ರಾಗಿ ತಳಿ ಕೆ.ಎಂ.ಆರ್-316 ಪ್ರಥಮ ಬಾರಿಗೆ ರೈತರ ತಾಕುಗಳಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಲಾಗಿದ್ದು, ಇದರ ಅಂಗವಾಗಿ ಬಂಗಾರಪೇಟೆ ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮದ ಗೋವಿಂದಗೌಡರವರ ಜಮೀನಿನಲ್ಲಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ತಳಿಯ ಬಗ್ಗೆ ರೈತರಾದ ಗೋವಿಂದಗೌಡ ಮತ್ತು ಹರೀಶ್ ರವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಳುಕು ರೋಗ ಮತ್ತು ಬರ ಸಹಿಷ್ಣುತೆ ತಡೆಯುವ ಹಾಗೂ ಹೆಚ್ಚು ತೆಂಡೆ ಹೊಡೆಯುವ ಶಕ್ತಿ ಹೊಂದಿದ್ದು, ಈ ತಳಿಯ ತೆನೆಯಲ್ಲಿ ಸರಾಸರಿ 9-10 ಇಳುಕುಗಳಿದ್ದು, ತೆನೆಯಲ್ಲಿ ಕಾಳುಗಳು ದಪ್ಪವಾಗಿ ಚೆನ್ನಾಗಿ ತುಂಬಿ ಕೊಂಡಿದ್ದು ಬೀಜ ಬೇರ್ಪಡಿಸಿದಾಗ ಕಡಿಮೆ ಹೊಟ್ಟು ಹಾಗು ತೆನೆಯ ಸರಾಸರಿ ತೂಕ 50 ಗ್ರಾಂ ಇದ್ದು ಗಿಡದ ಕಾಂಡ ದಪ್ಪ ಇರುವುದರಿಂದ ಬಾಗುವುದಿಲ್ಲವೆಂದು ಮತ್ತು ಒಂದು ಎಕರೆಗೆ 16-18 ಕ್ವಿಂಟಾಲ್ ಇಳುವರಿ ನಿರೀಕ್ಷಿಸಬಹುದೆಂದು ತಿಳಿಸಿದರು. ವಿಸ್ತರಣಾ ಶಿಕ್ಷಣ ಘಟಕ (ಕೋಲಾರ) ಮತ್ತು ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ಮುಖ್ಯಸ್ಥರಾದ ಡಾ. ಎಂ. ಪಾಪಿರೆಡ್ಡಿ ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ, ರಾಗಿ ತಳಿಯಾದ ಕೆ.ಎಂ.ಆರ್-316ರ ವಿಶೇಷ ಗುಣಗಳು ಮತ್ತು ಲಘುಪೋಷಕಾಂಶಗಳ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಈ ಸಂಧರ್ಭದಲ್ಲಿ ವಿಜ್ಞಾನಿಗಳಾದ ಡಾ. ದಿಲೀಪ್ ಎಸ್, ಮತ್ತು ಶ್ರೀಮತಿ ಸಿಂಧು .ಕೆ, ರವರು ಮಾತನಾಡಿ ರಾಗಿ ಬೀಜವನ್ನು ಅಜೋಸ್ಪಿರಿಲಮ್ ಸೂಕ್ಷ್ಮಾಣು ಜೀವಿಗಳಿಂದ ಬೀಜೋಪಚಾರ ಮಾಡುವುದರಿಂದ ಗಾಳಿಯಲ್ಲಿರುವ ಸಾರಜನಕವನ್ನು ಸ್ಥಿರಿಕರಿಸಿ ಗಿಡದ ಬೆಳೆವಣಿಗೆಗೆ ಸಹಕರಿಸುತ್ತದೆ ಎಂದು ರೈತರಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ನಾರಾಯಣರೆಡ್ಡಿ ರವರು ಕೃಷಿ ಇಲಾಖೆಯ ಯೋಜನೆಗಳನ್ನು ತಿಳಿಸಿಕೊಟ್ಟರು ಹಾಗು ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರಿಜಮ್ಮ, ಪಿ.ಡಿ.ಓ. ದೇವರಾಜು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ರವರು ಉಪಸ್ಥಿತರಿದ್ಧರು. 68 ರೈತ ಮತ್ತು ರೈತಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.