ಕೋಲಾರ:- ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವುದು ಬಡ್ಡಿರಹಿತ ಸಾಲ ಮಹಿಳೆಯರು ವದಂತಿಗಳಿಗೆ ಕಿವಿಗೊಡದಿರಿ, ಪಡೆದ ಸಾಲ ಮರುಪಾವತಿಸಿ, ಬ್ಯಾಂಕ್ ಉಳಿಸಿ ಬೆಳೆಸಿದ ನೀವು ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಲು ಕಾರಣರಾಗದಿರಿ ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ತೀರ್ಮಾನಕ್ಕೂ ಬ್ಯಾಂಕಿಗೂ ಸಂಬಂಧವಿಲ್ಲ ಏಕೆಂದರೆ ಬ್ಯಾಂಕಿನ ಸ್ವಂತ ಬಂಡವಾಳ, ಠೇವಣಿ ಜತೆಗೆ ಅಫೆಕ್ಸ್ ಬ್ಯಾಂಕ್,ನಬಾರ್ಡ್‍ನಿಂದ ಸಾಲ ತಂದು ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಿದ್ದೇವೆ ಎಂದು ತಿಳಿಸಿದರು.
ಬ್ಯಾಂಕ್ ಕಳೆದ 2016-17ನೇ ಸಾಲಿನಿಂದಲೂ ಭದ್ರತೆ ರಹಿತ ಸಾಲವನ್ನು ಮಹಿಳೆಯರಿಗೆ ನೀಡುತ್ತಿದೆ, ಮಹಿಳೆಯರು ಶೇ.100 ಮರುಪಾವತಿಯ ಮೂಲಕ ಬ್ಯಾಂಕನ್ನು ಉಳಿಸಿದ್ದಾರೆ, ಡಿಸಿಸಿ ಬ್ಯಾಂಕ್ ಇಂದು ಇಷ್ಟೊಂದು ಉತ್ತಮ ಸ್ಥಿತಿಯಲ್ಲಿ ಇರುವುದಕ್ಕೆ ಮಹಿಳೆಯರೇ ಕಾರಣ ಎಂದರು.
ಡಿಸಿಸಿ ಬ್ಯಾಂಕಿನ ಆಧಾರಸ್ತಂಭವಾಗಿರುವ ಮಹಿಳೆಯರು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ರಾಜ್ಯದಲ್ಲೇ ಬ್ಯಾಂಕನ್ನು ನಂ1 ಸ್ಥಾನಕ್ಕೆ ತಂದಿದ್ದಾರೆ, ಆದರೆ ಚುನಾವಣೆ ನಂತರ ಇದೀಗ ಸಾಲ ಮನ್ನಾದಂತಹ ವದಂತಿಗಳಿಗೆ ಕಿವಿಗೊಟ್ಟು ಸಾಲ ಮರುಪಾವತಿ ವಿಳಂಬ ಮಾಡಿದರೆ ಅದರಿಂದ ಬ್ಯಾಂಕಿನ ಆರ್ಥಿಕ ಸ್ಥಿತಿಗೆ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.
ಸಕಾಲಕ್ಕೆ ಸಾಲದ ಕಂತು ನೀವು ಮರುಪಾವತಿಸದಿದ್ದರೆ ನಿಮಗೂ ಬಡ್ಡಿಯ ಹೊರೆ ಬೀಳುತ್ತದೆ ಜತೆಗೆ ಬ್ಯಾಂಕ್ ಇತರೆ ತಾಯಂದಿರಿಗೂ ಸಾಲ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಈ ಎಲ್ಲಾ ಅಂಶಗಳನ್ನು ಮನಗಂಡು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ಬ್ಯಾಂಕನ್ನು ಉಳಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ ಎಂದರು.
ತಾಯಂದಿರು ವದಂತಿಗಳಿಗೆ ಕಿವಿಗೊಡದೇ ಸಾಲ ಮರುಪಾವತಿ ಮುಂದುವರೆಸುವ ಮೂಲಕ ಬ್ಯಾಂಕ್ ಸದೃಢವಾಗಿರಲು ಸಹಕರಿಸಬೇಕು ಎಂದು ಕೋರಿದ ಅವರು, ದಿವಾಳಿಯಾಗಿದ್ದ ಬ್ಯಾಂಕನ್ನು ಕಳೆದ 10 ವರ್ಷಗಳಿಂದ ನಿಮ್ಮ ಸಹಕಾರದಿಂದ ಉಳಿಸಿ,ಬೆಳೆಸಿದ್ದೇವೆ, ಮಹಿಳೆಯರ ಸಬಲೀಕರಣಕ್ಕೆ ನೆರವಾಗಿದ್ದೇವೆ, ಇಂತಹ ಸಂದರ್ಭದಲ್ಲಿ ಬ್ಯಾಂಕಿಗೆ ಶಕ್ತಿ ತುಂಬಿದ ನೀವೆ ಸಂಕಷ್ಟ ತಂದೊಡ್ಡದಿರಿ ಎಂದು ಮನವಿ ಮಾಡಿದರು.
ಖಾಸಗಿ ಸಾಲದ ಶೂಲಕ್ಕೆ
ಸಿಲುಕುತ್ತೀರಿ ಎಚ್ಚರ
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಮಹಿಳೆಯರಿಗೆ ಭದ್ರತೆ ರಹಿತ ಸಾಲ ನೀಡುವ ಮೂಲಕ ರಾಜ್ಯದ ಯಾವುದೇ ಡಿಸಿಸಿ ಬ್ಯಾಂಕ್ ಮಾಡದ ಧೈರ್ಯ ಮಾಡಿದ್ದೇವೆ, ಪಡೆದ ಸಾಲಕ್ಕೆ ನೀವು ಕೇವಲ ತಿಂಗಳಿಗೆ 1500 ಪಾವತಿಸಿದರೆ 36 ತಿಂಗಳಲ್ಲಿ ಸಾಲ ತೀರುತ್ತೆ ಆದರೆ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದರೆ ನೀವು ಖಾಸಗಿ ಸಾಲದ ಶೂಲಕ್ಕೆ ನೀವು ಸಿಕ್ಕಿಹಾಕಿಕೊಂಡರೆ ತಿಂಗಳಿಗೆ ಬಡ್ಡಿಯೇ 2500 ಕಟ್ಟಬೇಕಾಗುತ್ತದೆ ಎಂಬ ಸತ್ಯದ ಅರಿವು ಇರಲಿ, ನಿಮ್ಮದೇ ಬ್ಯಾಂಕ್ ಅದರ ಕತ್ತು ಹಿಸುಕುವ ಕೆಲಸ ಮಾಡದಿರಿ ಎಂದು ಮನವಿ ಮಾಡಿದರು.
ಯಾವುದೇ ಮಧ್ಯವರ್ತಿಗಳ ಹಾವಳಿ, ಲಂಚ,ಭ್ರಷ್ಟತೆಗೆ ಅವಕಾಶವಿಲ್ಲದೇ ನಿಮಗೆ ಸಾಲ ನೀಡಿದ್ದೇವೆ, ನಿಮ್ಮ ಮರುಪಾವತಿಯ ಬದ್ದತೆಗೆ ಧನ್ಯವಾದ ತಿಳಿಸುವೆ, ಅದೇ ಬದ್ದತೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಇರಬೇಕಿದೆ, ನಿಮ್ಮದೇ ಬ್ಯಾಂಕ್ ಉಳಿಸಿಕೊಳ್ಳುವ ಹೊಣೆಗಾರಿಕೆಯೂ ನಿಮ್ಮದೇ ಆಗಿದೆ ಎಂದರು.
24119 ಸಂಘಗಳು
3 ಲಕ್ಷ ಕುಟುಂಬಗಳು
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 24119 ಸ್ತ್ರೀಶಕ್ತಿ ಸಂಘಗಳ 3 ಲಕ್ಷ ಕುಟುಂಬಗಳ ಮಹಿಳೆಯರಿಗೆ ಸಾಲ ನೀಡಿದೆ, ಇಷ್ಟೊಂದು ಭದ್ರತೆರಹಿತ ಸಾಲ ನೀಡಿರುವ ಖ್ಯಾತಿ ಡಿಸಿಸಿ ಬ್ಯಾಂಕಿಗೆ ಮಾತ್ರವಿದೆ ಎಂದರು.
ದಿವಾಳಿಯಾಗಿದ್ದ ಬ್ಯಾಂಕನ್ನು ನಿಮ್ಮ ಮಗುವಿನಂತೆ ಗರ್ಭದಲ್ಲಿ 9 ತಿಂಗಳು ರಕ್ಷಿಸಿ ಸಾಕಿದ್ದೀರಿ, ಇದೀಗ ನೀವು ಸಾಲ ಸಕಾಲಕ್ಕೆ ಮರುಪಾವತಿ ಮಾಡದಿದ್ದರೆ ನಿಮ್ಮದೇ ಮಗು ಸಾಯುವಂತಾಗುತ್ತದೆ ಎಂದು ತಿಳಿಸಿ, ನೀವು ಸಾಲ ಮನ್ನಾ ಆಮಿಷಕ್ಕೆ ಒಳಗಾಗದಿರಿ, ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದರೆ ಮತ್ತೆ ನಿಮಗೆ ಸಾಲ ನೀಡುವ ಧೈರ್ಯ ಮಾಡಲು ಸಾಧ್ಯವಿಲ್ಲ, ಅದರಿಂದ ಲಕ್ಷಾಂತರ ಮಹಿಳೆಯರ ಸಬಲೀಕರಣ,ಸ್ವಾವಲಂಬಿ ಬದುಕಿಗೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ಅಧಿಕಾರಿಗಳಾದ ಭಾನುಪ್ರಕಾಶ್, ಮಂಗಳಗೌರಿ ಮತ್ತಿತರರಿದ್ದರು.