Reported by : Richard Dsouza
ಉಡುಪಿ: ಕಾರ್ಕಳದಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ದಾಂಧಲೆ ಎಬ್ಬಿಸಿರುವುದ ಖಂಡನೀಯ. ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ನಡೆಸುವ ಬದಲು ಅವರ ಮನವೊಲಿಸಿ ಸಮಸ್ಯೆ ಅರಿಯುವ ಕೆಲಸ ಮಾಡಬೇಕಿತ್ತು ಎಂದು ಕ್ರೈಸ್ತ ನಾಯಕಿ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.
ನೇರವಾಗಿ ಹೋಗಿ ದಾಳಿ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಾರ್ಥನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದ್ದು ಎಲ್ಲಾ ಧರ್ಮದವರ ಪ್ರಾರ್ಥನೆಗಳು ಎಲ್ಲಾ ಕಡೆಯಲ್ಲೂ ನಡೆಯುತ್ತಿದ್ದು ಕೊನೆಯಲ್ಲಿ ಪ್ರತಿಯೊಬ್ಬರು ಆರಾಧಿಸುವುದು ದೇವರನ್ನು. ಒಂದು ವೇಳೆ ಪ್ರಾರ್ಥನೆಗೆ ಅನ್ಯಧರ್ಮದವರು ತೆರಳಿದ್ದರೆ ಅದನ್ನು ತಡೆಯಲು ಬೇರೆ ಮಾರ್ಗವನ್ನು ಅನುಸರಿಸಬಹುದಿತ್ತು. ಹೀಗೆ ಮಹಿಳೆಯರು ಮಕ್ಕಳು ಸೇರಿದ ಸಮಯದಲ್ಲಿ ಹೋಗಿ ದಾಳಿ ಮಾಡಿ ಏನೂ ಕೂಡ ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ಅಂತ ಕುಟುಂಬಗಳಿಗೆ ಹಿಂದೂ ಸಂಘಟನೆಯವರು ವೈಯುಕ್ತಿಕವಾಗಿ ಮನ ಪರಿವರ್ತಿಸುವ ಕೆಲಸ ಮಾಡಬಹುದಿತ್ತು. ಅದನ್ನು ಬಿಟ್ಟು ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಅಲ್ಲಿ ಹೋಗಿ ಗದ್ದಲ ಎಬ್ಬಿಸುವುದು ಒಳ್ಳೆಯ ಸಂಸ್ಕೃತಿಯಲ್ಲ. ಇದು ಒಂದು ರೀತಿಯ ರಾಜಕೀಯ ಪ್ರೇರಿತ ದಾಳಿ ಎನ್ನುವುದು ತೋರುತ್ತದೆ. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಪೊಲೀಸರು ಅಧಿಕಾರಿಗಳು ಗಮನ ಹರಿಸಬೇಕಾದ ಅಗತ್ಯತೆ ಇದೆ.
ಒಂದು ವೇಳೆ ಇಂತಹ ಪ್ರಾರ್ಥನೆಗಳಿಗೆ ಅನ್ಯ ಧರ್ಮದವರು ಹೋಗಿದ್ದರೆ ಅವರುಗಳು ಯಾಕಾಗಿ ಅಲ್ಲಿಗೆ ತೆರಳುತ್ತಾರೆ ಅವರ ಮನಶಾಂತಿ ಸಿಗುತ್ತದೆ ಎಂದು ಹೋಗಿರಬಹುದು. ನಿಜವಾಗಿ ಅಂತ ವ್ಯಕ್ತಿಗಳಿಗೆ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಂಘಟನೆಯವರು ಯಾಕೆ ಕೆಲಸ ಮಾಡುತ್ತಿಲ್ಲ? ಅದನ್ನು ಬಿಟ್ಟು ಏಕಾಏಕಿ ಮಹಿಳೆಯರ, ಮಕ್ಕಳ ಮೇಲೆ ದಾಳಿ ಮಾಡುವಂತದ್ದು ಹಿಂದೂ ಸಂಸ್ಕೃತಿ ಅಲ್ಲ ಎನ್ನುವುದು ನಮ್ಮ ನಂಬಿಕೆಯಾಗಿದೆ. ಜನರ ಮನಃ ಪರಿವರ್ತನೆ ಮಾಡುವ ಮೂಲಕ ಅವರ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಿದೆ.
ಈಗಾಗಲೇ ಕ್ರೈಸ್ತ ಸಮುದಾಯದ ಹಲವಾರು ಮಂದಿ ಹಿಂದೂ ದೇಗುಲಗಳನ್ನು ಕಟ್ಟಿಕೊಟ್ಟಾಗ ಕೂಡ ನಮ್ಮ ಸಮುದಾಯವರು ಎಲ್ಲಿಯೂ ಕೂಡ ವಿರೋಧಿಸಿಲ್ಲ ಯಾಕಂದರೆ ಅದೆಲ್ಲಾ ಅವರವರ ವೈಯುಕ್ತಿಕ ಆಸೆ ಅಥವಾ ಇಚ್ಛೆ ಆಗಿರುತ್ತದೆ. ಪ್ರತಿಯೊಬ್ಬನಿಗೂ ತನಗೆ ಇಷ್ಟವಾದ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ ದೇಶದ ಸಂವಿಧಾನದಲ್ಲಿಯೇ ಅವಕಾಶ ನೀಡಿದೆ ಎನ್ನುವುದು ಕೂಡ ಮರೆಯಬಾರದು. ಇಂತಹ ಘಟನೆಗೆ ಕಾರಣರಾದವರ ಮೇಲೆ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಶಾಂತಿಯುತವಾಗಿರುವ ಉಡುಪಿ ಜಿಲ್ಲೆಯಲ್ಲಿ ಕೋಮು ಘರ್ಷಣೆಯಾಗದಂತೆ ಇನ್ನೂ ಮುಂದಾದರೂ ಕೂಡ ಜಿಲ್ಲೆಯ ಸಚಿವರು ಶಾಸಕರು ಗಮನಹರಿಸಬೇಕಾಗಿದೆ.
ಜಿಲ್ಲೆಯ ಹಿಂದೂ ಸಂಘಟನೆಗಳು ಇಂತಹ ವಿಚಾರಗಳಿಗೆ ಗಮನಹರಿಸಿದಷ್ಟೇ ದೇಶದ ಇನ್ನೂ ಹತ್ತು ಹಲವು ಸಮಸ್ಯೆಗಳಾದ ಬಡತನ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕೂಡ ಪ್ರತಿಭಟಿಸಬೇಕಾಗಿದೆ. ದೇಶದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸವನ್ನು ಕೂಡ ಹಿಂದೂ ಜಾಗರಣ ವೇದಿಕೆ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.