ಶಾಸಕಿ ರೂಪಕಲಾರಿಂದ ಮಿನಿ ವಿಧಾನಸೌಧ ಕಾಮಗಾರಿ ಪರಿಶೀಲನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಶಾಸಕಿ ರೂಪಕಲಾ ಎಂ ಶಶಿಧರ್ ಅವರು ಕೆಜಿಎಫ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ, ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ರೈತರು ಹಾಗೂ ಸಾರ್ವಜನಿಕರು ಬಂಗಾರಪೇಟೆಗೆ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಶ್ರಮವಹಿಸಿ ಮಿನಿ ವಿಧಾನಸೌದ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆದಿದ್ದು ಕಾಮಗಾರಿಯಲ್ಲಿ ಈ ರೀತಿ ವಿಳಂಬ ಧೋರಣೆ ಸಹಿಸಲಾಗುವುದಿಲ್ಲ ಎಂದರು.
ಪ್ರತಿ ವಾರಕ್ಕೊಮ್ಮೆ ಕಾಮಗಾರಿಯ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರಗತಿ ಪರಿಶೀಲಿಸಲು ಸ್ಥಳದಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ರವರಿಗೆ ತಿಳಿಸಿದರು.
ತಹಶಿಲ್ದಾರ್ ಕಛೇರಿಯ ಅಬಿಲೇಖಾಲಯ ಕೆ.ಜಿ.ಎಫ್. ತಹಶಿಲ್ದಾರ್ ಕಛೇರಿಗೆ ಸ್ಥಳಂತರಿಸಲಾಗದೆ ಸಾರ್ವಜನಿಕರು ವಿಶೇಷವಾಗಿ ರೈತರು ತಮ್ಮ ಜಮೀನಿನ ದಾಖಲೆಗಳಿಗೆ ಬಂಗರಪೇಟೆ ಕಛೇರಿಗೆ ಹೋಗಿ ಪರದಾಡುವಂತಾಗಿದೆ ಎಂದು ಬೇಸರ ತೋರಿದರು.
ಮಿನಿ ವಿಧಾನಸೌಧ ಕಟ್ಟಡ ಕಾರ್ಯನಿರ್ವಹಿಸಲು ಪ್ರಾರಂಭಿಸಿದಲ್ಲಿ ಪ್ರಮುಖ ಕಚೇರಿಗಳು ಒಂದೇ ಸೂರಿನಡಿ ಬರುವುದರಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗಿ ಬಗೆಹರಿಯಲಿವೆ ಎಂದು ತಿಳಿಸಿದರು.
ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಕಟ್ಟಡವನ್ನು ಕಂದಾಯ ಇಲಾಖೆ ಹಸ್ತಾಂತರಿಸಲು ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್ ರವರಿಗೆ ಸೂಚಿಸಿದರು.
ಹಾಲಿ ಹಲವು ಕಛೇರಿಗಳು ಬೇರೆ ಬೇರೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುತ್ತದೆ ಎಂದು ಶಾಸಕರು ತಿಳಿಸಿದರು.
ಎಕ್ಸಿಕ್ಯುಟಿವ್ ಇಂಜಿನಿಯರ್ ರವರು ಹಾಲಿ ಪ್ರಗತಿಯಲ್ಲಿರುವ ಕಟ್ಟಡದ ವಿವಿಧ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿ, ಎರಡು ತಿಂಗಳ ಒಳಗಾಗಿ ಮಿನಿ ವಿಧಾನಸೌಧ ಕಟ್ಟಡವನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು ಎಂದು ಮಾನ್ಯ ಶಾಸಕರಿಗೆ ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಮಾನ್ಯ ಮಂತ್ರಿಗಳಿಗೆ ಮನವಿ ನೀಡಿ ರೂ.2.00 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದ್ದು, ಇದರ ಅಡಿ ನೀಡಿರುವ ಕಾಮಗರಿಗಳ ಪಟ್ಟಿ ಪೈಕಿ ಸ್ಟೇಷನ್ ರಸ್ತೆ ಹಾಗೂ ಆಂಡರಸನ್ ಪೇಟೆ ರಸ್ತೆಯನ್ನು ಕೂಡಲೆ ದುರಸ್ತಿ ಪಡಿಸಲು ಸೂಚಿಸಿದರು.
ಮಾರಿಕುಪ್ಪ ರೈಲ್ವೆ ನಿಲ್ದಾಣದ ಬಳಿ ರಸ್ತೆ ತೀರಾ ಹಾಳಾಗಿದ್ದು ಸದರಿ ರಸ್ತೆಗೆ ರೂ.1.55 ಕೋಟಿ ನೀಡಿದ್ದು ಕೂಡಲೆ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.
ಚಂದ್ರಶೇಖರ್ ಎಕ್ಸಿಕ್ಯುಟಿವ್ ಇಂಜಿನಿಯರ್ ಲೋ.ಇ., ಶ್ರೀ ರವಿ, ಎ.ಇ.ಇ., ವಿ.ಮುನಿಸ್ವಾಮಿ ಅಧ್ಯಕ್ಷರು ನಗರಸಭೆ, ಮಂಜುನಾಥ್, ಇ.ಒ. ತಾಲ್ಲೂಕು ಪಂಚಾಯತಿ, ಮದಲೈ ಮುತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸುರೇಶ್ ಕುಮಾರ್ ಉಪ ತಹಶಿಲ್ದಾರ್,ಕÀರುಣಾಕರ್ ನಗರ ಸಭೆ ಸದಸ್ಯರು, ರಾಜಶೇಖರ್ ಅಸಿಸ್ಟೆಂಟ್ ಇಂಜಿನಿಯರ್, ನರಸೇಗೌಡ ಗುತ್ತಿಗೆದಾರರು ಹಾಜರಿದ್ದರು.