ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಮಾ.23 : ಕೋಲಾರ ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಕೂಡಲೇ ಸರಿಪಡಿಸಬೇಕು ಹಾಗೂ 32 ವಾರ್ಡುಗಳ ಕಸವನ್ನು ಕಸ ವಿಂಗಡನೆ ಮಾಡದೆ ಸುರಿಯುತ್ತಿರುವದನ್ನು ಖಂಡಿಸಿ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಮನವಿ ಪತ್ರವನ್ನು ಕೋಲಾರ ನಗರಸಭೆಯ ಆಯುಕ್ತರಿಗೆ ಸಲ್ಲಿಸಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ ಕೋಲಾರ ನಗರದಲ್ಲಿ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದ್ದು, ನೀರಿನ ಅಭಾವವನ್ನು ನೀಗಿಸಲು ನಗರಸಭೆ ಅಧಿಕಾರಿಯಾದ ತಾವು ಎಲ್ಲಾ ವಾರ್ಡುಗಳಿಗೂ ಭೇಟಿ ನೀಡಿ ಪ್ರತಿ ವಾರ್ಡಿನಲ್ಲಿಯೂ ಕೂಡ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದ ರೀತಿ ಕ್ರಮ ಕೈಗೊಳ್ಳಬೇಕು. ಹಾಗೂ ನಗರದಲ್ಲಿನ ವಾರ್ಡುಗಳಲ್ಲಿರುವ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲಲ್ಲಿ ಅಪಘಾತಗಳೂ ಸಹ ಸಂಭವಿಸುತ್ತಿದೆ. ದೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.
ನಗರದ ವಾರ್ಡುಗಳಲ್ಲಿ ಕಸ ಶೇಖರಣೆ ಮಾಡಿ ಅದನ್ನು ವಿಂಗಡನೆ ಮಾಡದೆ ಒಟ್ಟಾಗಿ ಅನಧಿಕೃತವಾಗಿ ಚಿಂತಾಮಣಿ ರಸ್ತೆಯ ಪಕ್ಕದಲ್ಲಿ ಕಾನೂನು ಬಾಹಿರವಾಗಿ ಸುರಿಯುತ್ತಿದ್ದಾರೆ. ತಮ್ಮ ಗಮನಕ್ಕೆ ಇದ್ದರೂ ಕೂಡ ಸುತ್ತಮುತ್ತಲಿನ ಹಳ್ಳಿಯ ಜನಕ್ಕೆ ಆ ಕಸದಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಮಟ್ಟಕ್ಕೆ ಕಸ ವಿಲೇವಾರಿಯನ್ನು ಮಾಡುತ್ತಿದ್ದೀರಿ ವೈಜ್ಞಾನಿಕವಾಗಿ ಕಸವಿಲೇವಾರಿ ಘಟಕಗಳನ್ನು ಕೂಡಲೇ ನಿರ್ಮಾಣ ಮಾಡಬೇಕು. ಈ ಹಿಂದೆ ಎಲ್ಲಾ ಅಧಿಕಾರಿಗಳು ಅಧ್ಯಕ್ಷರು ಹಾಲಿ, ಮಾಜಿ ನಗರಸಭೆ ಅಧಿಕಾರಿಗಳು ಕೆಂದಟ್ಟಿ ಬಳಿ ಹೋಗಿ ಗುದ್ದಲಿ ಪೂಜೆ ನೆರವೇರಿಸಿದ್ದೀರಿ. ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರು 10 ಎಕರೆ ಜಾಗವನ್ನು ಮಂಜೂರು ಮಾಡಿದ್ದೇನೆ ಎಂದು ತಿಳಿಸಿದರು. ನೀವು ಸಹ ಆ ಜಾಗಲ್ಲಿ ಪೂಜೆಯನ್ನು ಮಾಡಿರುತ್ತೀರಿ. ಬರೀ ಮೂರು ತಿಂಗಳ ಒಳಗೆ ಕೆಂದಟ್ಟಿ ಬಳಿ ನೂತನ ಕಸ ವಿಲೇವಾರಿ ಘಟಕವನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದಾಗಿ ತಿಳಿಸಿದ್ದು, ಇದುವರೆಗೂ ಯಾವುದೇ ಕಾಮಗಾರಿ ನಡೆಸದೆ ಅನಧಿಕೃತವಾಗಿ ಕಸವನ್ನು ಚಿಂತಾಮಣಿ ರಸ್ತೆಯಲ್ಲಿ ಸುರಿಯುತ್ತಿರುವುದು ಕಾನೂನು ಬಾಹಿರವಲ್ಲವೇ? ಯಾಕೆ ನೀವು ಕೋಲಾರ ನಗರವನ್ನು ಹಾಳುಗೆಡವುತ್ತಿದೀರಿ ಎಂದು ಎಂದು ಪ್ರಶ್ನಿಸಿದರು. ಹಾಗೂ ಕೂಡಲೇ ನಗರದ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಮಿ, ಜಿಲ್ಲಾ ಗೌರವಾಧ್ಯಕ್ಷ ಕೊಲದೇವಿ ಗೋಪಾಕೃಷ್ಣಮೂರ್ತಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ಕೋಲಾರ ತಾಲ್ಲೂಕು ಅಧ್ಯಕ್ಷ ಪಿ.ಎಂ.ಜಗನ್ನಾಥರೆಡ್ಡಿ, ಮುಳಬಾಗಿಲು ನಗರ ಅಧ್ಯಕ್ಷ ಹೆಚ್.ಎಂ.ಆರ್. ಸತೀಶ್, ರೈತ ಮುಖಂಡರು ಉತ್ತನೂರು ಶಿವಣ್ಣ ಭಾಗವಹಿಸಿದ್ದರು.