ಕೋವಿಡ್ ಸೋಂಕಿತರಿಗೆ ತೊಂದರೆಯಾಗದಂತೆ ಮೂಲಭೂತ ಸೌಕರ್ಯ ಒದಗಿಸಲಾಗುವುದು -ಡಾ | ಅಶ್ವಥ್ ನಾರಾಯಣ.ಸಿ.ಎನ್.

ವರದಿ; ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಕೋಲಾರ ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಕೋವಿಡ್ -19 ಪ್ರಗತಿ ಪರಿಶೀಲನಾ ಸಭೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ಕೋವಿಡ್ ನಿರ್ವಹಣೆಯ ಪರಿಶೀಲನೆ ನಡೆಸಲಾಗುವುದು . ಕೋವಿಡ್ ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಬೆಡ್ , ಆಕ್ಸಿಜನ್ , ತ್ವರಿತವಾಗಿ ಚಿಕಿತ್ಸೆ , ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು ಎಂದು ಉಪ ಮುಖ್ಯಮಂತ್ರಿಗಳಾದ ಡಾ || ಅಶ್ವಥ್ ನಾರಾಯಣ ಸಿ.ಎನ್ . ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗಂಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ವೀಡಿಯೋ ಕಾನ್ಸರೆನ್ಸ್ ಮೂಲಕ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು . ಜಿಲ್ಲೆಯಲ್ಲಿ ಕೋವಿಡ್ 2 ನೇ ಅಲೆಯನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು . ಕೋವಿಡ್ ಪರೀಕ್ಷೆ ನಡೆದ 24 ಗಂಟೆಯೊಳಗೆ ಫಲಿತಾಂಶ ನೀಡಬೇಕು . ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸುವುದು ರಕ್ತಪರೀಕ್ಷೆ , ಬೇರೆ ಎಲ್ಲಾ ಪರೀಕ್ಷೆಗಳನ್ನು ಶೀಘ್ರವಾಗಿ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ . ತಾಲ್ಲೂಕುವಾರು ವೈದ್ಯಾಧಿಕಾರಿಗಳಿಗೆ ಕೋವಿಡ್ ನಿರ್ವಹಣೆ ಕೋವಿಡ್ ಲಸಿಕೆ ಹಾಗೂ ಚಿಕಿತ್ಸೆಯನ್ನು ಶೀಘ್ರವಾಗಿ ಸೋಂಕನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಗಡಿಯಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿ , ಕೋವಿಡ್ ಪರೀಕ್ಷೆಯನ್ನು ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು . ಲಾಕ್‌ಡೌನ್ ಇರುವ ಕಾರಣ ಬೆಂಗಳೂರಿನಿಂದ ಹಳ್ಳಿಗಳ ಕಡೆ ಹೆಚ್ಚು ಜನ ಬರುತ್ತಿದ್ದಾರೆ . ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ತಮ್ಮ ಕುಟುಂಬಗಳನ್ನು ಕಾಪಾಡಿಕೊಳ್ಳಬೇಕು . ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆಯನ್ನು ಕಲ್ಪಿಸಲು ಆಸ್ಪತ್ರೆಯವರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ತಿಳಿಸಿದರು . ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ , ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ . ಎಸ್.ಎನ್.ಆರ್ , ಜಿಲ್ಲಾ ಆಸ್ಪತ್ರೆಯಲ್ಲಿ 200 ಬೆಡ್‌ಗಳು , ಆಕ್ಸಿಜನ್ , ವೆಂಟಿಲೇಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ . ಕೋವಿಡ್ ವಾರ್ ರೂಮ್ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು .

ಸರ್ಕಾರ , ಜಿಲ್ಲಾಡಳಿತ , ಜಿಲ್ಲಾ ಆರೋಗ್ಯ ಇಲಾಖೆ , ಚುನಾವಣಾ ಪ್ರತಿನಿಧಿಗಳು , ಗ್ರಾಮ ಪಂಚಾಯಿತಿ ಸದಸ್ಯರು , ಪಿ.ಡಿ.ಓ.ಗಳು ಮತ್ತು ಆಶಾ ಕಾರ್ಯಕರ್ತೆಯರು ಪ್ರತಿ ಹಳ್ಳಿಯಲ್ಲಿ ಕೋವಿಡ್ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು . ಲಾಕ್‌ಡೌನ್ ಇರುವ ಕಾರಣ ಬೆಂಗಳೂರಿನಿಂದ ಹೆಚ್ಚು ಜನ ಹಳ್ಳಿಗಳ ಕಡೆ ಬರುತ್ತಿದ್ದಾರೆ . ಅವರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು . ಮೊಬೈಲ್ ವ್ಯಾಕ್ಸಿನ್ ಹಾಕಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು . ಕೋಲಾರ ಜಿಲ್ಲೆಯನ್ನು ಕರೋನಾ ಮುಕ್ತ ಮಾಡಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ , ನಮ್ಮ ಜನರನ್ನು ಉಳಿಸಿ ಕೊಳ್ಳೋಣ . ಜನರಲ್ಲಿ ಕರೋನಾದ ಬಗ್ಗೆ ಜಾಗೃತಿ ಹಾಗೂ ಲಸಿಕೆ ಹಾಕಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕು . ಲಸಿಕೆಯ ಬಗ್ಗೆ ಯಾವುದೇ ಭಯ ಪಡದೆ ಲಸಿಕೆಯನ್ನು ಪಡೆಯಬೇಕು . ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ವೈ.ಎನ್ . ನಾರಾಯಣಸ್ವಾಮಿ ಅವರು ಮಾತನಾಡಿ ಕೋವಿಡ್ 2 ನೇ ಅಲೆಯು ಶೀಘ್ರವಾಗಿ ಹರಡುತ್ತಿರುವುದು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು , ಹೋಂ ಐಸೋಲೇಷನ್ ಚಿಕಿತ್ಸೆ , ವೆಂಟಿಲೇಟರ್ , ಕೋವಿಡ್ ಪರೀಕ್ಷೆಯ ಬಗ್ಗೆ ತಿಳುವಳಿಕೆ ನೀಡಬೇಕು . ಆಕ್ಸಿಜನ್ ಟ್ಯಾಂಕ್ ಅಳವಡಿಕೆಗೆ ಬೇಗನೆ ಚಾಲನೆ ನೀಡಲು ಮನವಿ ಮಾಡಿದರು . ಜಿಲ್ಲಾಧಿಕಾರಿಗಳಾದ ಡಾ || ಆರ್ . ಸೆಲ್ವಮಣಿ ಅವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ . ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ , ವೆಂಟಿಲೇಟರ್ , ಚಿಕಿತ್ಸೆ , ಯಾವುದೇ ತೊಂದರೆ ಇಲ್ಲದೆ ನೀಡುತ್ತಿದ್ದೇವೆ . ಕೋವಿಡ್ ಲಸಿಕೆಯನ್ನು ಸರ್ಕಾರದ ನಿಯಮದಂತೆ ವೇಗವಾಗಿ ನೀಡುತ್ತಿದ್ದೇವೆ . ಕೋವಿಡ್ ನಿರ್ಮೂಲನೆಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

ವೀಡಿಯೋ ಕಾನ್ಸರೆನ್ಸ್ ಮೂಲಕ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ.ನಂಜೇಗೌಡ ಅವರು ಮಾತನಾಡಿ ಬೆಂಗಳೂರಿನಿಂದ ಮಾಲೂರಿಗೆ ಹೆಚ್ಚಾಗಿ ಜನ ಬರುತ್ತಿದ್ದಾರೆ . ಅವರು ಅಲ್ಲೇ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡು , ಪಾಸಿಟಿವ್ ಬಂದರೆ ಅಲ್ಲೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು . ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದ್ದು ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ . ಕೈಗಾರಿಕೆಗಳಲ್ಲಿ ಹೆಚ್ಚು ಜನರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ . ಅವರನ್ನು ಕರೆದು ಸಭೆ ಮಾಡಿ , ಕಾರ್ಮಿಕರು ಬಾಡಿಗೆ ಕೊಠಡಿಗಳಲ್ಲಿ ಆರು , ಏಳು ಜನ ಒಟ್ಟಾಗಿ ಇರುತ್ತಾರೆ . ಇದರಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ವೀಡಿಯೋ ಕಾನ್ಸರೆನ್ಸ್ ಮೂಲಕ ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್ ಅವರು ಮಾತನಾಡಿ ಆಸ್ಪತ್ರೆಗಳಲ್ಲಿ ಕೋವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿ ಕಡಿಮೆ ಇದ್ದಾರೆ . ಆಸ್ಪತ್ರೆಗಳಲ್ಲಿ ಬೆಡ್ , ಆಕ್ಸಿಜನ್ ಕೊರತೆಗಳು ಇವೆ . ಲಾಕ್‌ಡೌನ್ ಇರುವ ಕಾರಣ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ . ಇದರಿಂದ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು , ಕೋವಿಡ್ ಲಸಿಕೆ , ಆಸ್ಪತ್ರೆ ವ್ಯವಸ್ಥೆ , ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮನವಿ ಮಾಡಿದರು.

ಸಭೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸ ಗೌಡ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್‌ರೆಡ್ಡಿ , ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಇಲಕ್ಕಿಯಾ ಕರುಣಾಕರನ್ , ಅಪರ ಜಿಲ್ಲಾಧಿಕಾರಿಗಳಾದ ಡಾ | ಸ್ನೇಹಾ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ವಿಜಯ್‌ಕುಮಾರ್ , ಡಾ | ಜಗದೀಶ್ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ | ಚಾರಿಣಿ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.