ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೊ ರವರಿಗೆ ಉದ್ಯಾವರದಲ್ಲಿ ಅದ್ದೂರಿ ಸನ್ಮಾನ

JANANUDI.COM NETWORK

ಉದ್ಯಾವರ : ಸೋನಿ ವಾಹಿನಿಯಲ್ಲಿ ನಡೆದ ಪ್ರತಿಷ್ಠಿತ ಇಂಡಿಯನ್ ಐಡಲ್ ಸೀಸನ್ 12ರ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿ 5ನೇ ಸ್ಥಾನ ಗಳಿಸಿದ ಏಕೈಕ ಕನ್ನಡಿಗ, ಮೂಡುಬಿದ್ರೆ ಅಲಂಗಾರಿನ ನಿಹಾಲ್ ತಾವ್ರೋ ರವರಿಗೆ ಉದ್ಯಾವರದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಅದ್ದೂರಿ ಸನ್ಮಾನ ನಡೆಸಲಾಯಿತು.
ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಐಸಿವೈಎಂ ಉದ್ಯಾವರ ಸಂಘಟನೆಯ ಸಹಕಾರದೊಂದಿಗೆ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ನಿಹಾಲ್ ತಾವ್ರೊ ರವರಿಗೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಝೇವಿಯರ್ ಸಭಾಭವನದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್, ಹಲವು ಹಿರಿಯ ಗಾಯಕರ ಸಾಲಿಗೆ ನಿಹಾಲ್ ತಾವ್ರೊ ಸೇರ್ಪಡೆಯಾಗಬೇಕು. ನಿಹಾಲ್ ಅವರಲ್ಲಿ ಅದ್ಭುತವಾದ ಕಲೆ ಇದೆ. ಇಲ್ಲಿಗೆ ತಮ್ಮ ಪ್ರತಿಭೆಯನ್ನು ನಿಲ್ಲಿಸದೆ, ಮುಂದುವರಿದು ಇನ್ನಷ್ಟು ಎತ್ತರದ ಸ್ಥಾನಕ್ಕೆ ತಲುಪಲು ಪ್ರಯತ್ನಿಸಿ. ನೀವು ಸರಳ ಸ್ವಭಾವದವರೆಂಬುದು ನಮಗೆ ಈಗಾಗಲೇ ಮನವರಿಕೆಯಾಗಿದೆ. ಆದಷ್ಟು ಬೇಗ ಪ್ರಖ್ಯಾತ ಹಿನ್ನಲೆ ಗಾಯಕರಾಗುವ ಭಾಗ್ಯವು ದೊರಕಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡುತ್ತಾ, ದೊಡ್ಡ ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿದ ನಿಹಾಲ್ ರವರ ಸಾಧನೆಯನ್ನು ನಮ್ಮ ರಾಜ್ಯ ಮಾತ್ರವಲ್ಲದೆ ವಿಶ್ವವೇ ಕೊಂಡಾಡಿವೆ. ಸಾಧನೆ ಮಾಡಿದ ಸಾಧಕರನ್ನು ಪ್ರೋತ್ಸಾಹಿಸುವುದರಿಂದ ಇನ್ನಷ್ಟು ಸಾಧಕರು ಬೆಳಕಿಗೆ ಬರುತ್ತಾರೆ. ನಿಹಾಲ್ ರವರ ಸಾಧನೆಯಿಂದ ನಮಗೆಲ್ಲರಿಗೂ ಸಂತೋಷವಾಗಿದ್ದೆ ಅವರಿಂದ ಇನ್ನಷ್ಟು ಸಾಧನೆಯಾಗಲಿ ಎಂದು ಶುಭ ಹಾರೈಸಿ ಅಭಿನಂದಿಸಿದರು.
ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ ಸ್ಟ್ಯಾನಿ ಬಿ ಲೋಬೊ ಮಾತನಾಡುತ್ತಾ, ಜೀವನದಲ್ಲಿ ನಿರ್ದಿಷ್ಟ ಗುರಿ ಇದ್ದರೆ ಮಾತ್ರ, ಆ ಗುರಿ ತಲುಪಲು ಸಾಧ್ಯ. ಚಿಕ್ಕ ವಯಸ್ಸಿನಿಂದಲೇ ನಿರ್ದಿಷ್ಟ ಗುರಿಯಿಟ್ಟಿದ್ದ ನಿಹಾಲ್ ಇಂದು ತನ್ನ ಗುರಿಯನ್ನು ತಲುಪಿದ್ದಾರೆ. ಇದು ಪ್ರಸ್ತುತ ಯುವಜನರಿಗೆ ಪ್ರೇರಣೆಯಾಗಬೇಕು ಎಂದರು.
ಅಭಿನಂದನಾ ಸಮಾರಂಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಲಯನ್ಸ್ ಜಿಲ್ಲಾ ದ್ವಿತೀಯ ಉಪ ಗವರ್ನರ್ ಲ. ನೇರಿ ಕರ್ನೇಲಿಯೊ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಗೋಡ್ಫ್ರೀ ಡಿಸೋಜ, ಐಸಿವೈಎಂ ಅಧ್ಯಕ್ಷ ರೋಯಲ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಂಡಿಯನ್ ಐಡಲ್ ಖ್ಯಾತಿಯ ಫೈನಲಿಸ್ಟ್ ನಿಹಾಲ್ ತಾವ್ರೊ, ನಾನು ಮಾತನಾಡುವುದು ಕಡಿಮೆ. ಸಂಗೀತವೆಂದರೆ ಇಷ್ಟ. ನನಗೆ ನನ್ನ ತಂದೆ ರೋಲ್ ಮಾಡಲ್. ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಸ್ಪರ್ಧೆ ಹತ್ತು ತಿಂಗಳು ತನಕ ವಿಸ್ತರಿಸಿದ್ದು ದೊಡ್ಡ ದಾಖಲೆ. ಬಹಳ ಪ್ರಯತ್ನ ಪಟ್ಟು ಈ ಸ್ಥಾನಕ್ಕೆ ತಲುಪಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು. ಬಳಿಕ ಸಂಘಟಕರು ಹಾಗೂ ಪ್ರೇಕ್ಷಕರ ಮನವಿಗಾಗಿ ವಿವಿಧ ಭಾಷೆಯ ಹಾಡುಗಳನ್ನು ಹಾಡಿ ಪ್ರೇಕ್ಷಕರಿಗೆ ರಂಜಿಸಿದರು. ಈ ನಡುವೆ ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತ್ತು.
ನಿರಂತರ್ ಉದ್ಯಾವರ ಅಧ್ಯಕ್ಷ ಸ್ಟೀವನ್ ಕುಲಾಸೊ ಉದ್ಯಾವರ ಸ್ವಾಗತಿಸಿದರೆ, ಕಾರ್ಯದರ್ಶಿ ಒಲಿವೀರಾ ಮತಾಯಸ್ ಧನ್ಯವಾದ ಸಮರ್ಪಿಸಿದರು. ಆರ್ ಜೆ ಎರೊಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಅಭಿನಂದನ ಪತ್ರವನ್ನು ಮೈಕಲ್ ಡಿಸೋಜ ವಾಚಿಸಿದರು.
ಅಭಿನಂದನಾ ಸಮಾರಂಭದ ಬಳಿಕ ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಇದೇ ಸಂದರ್ಭದಲ್ಲಿ ನಿಹಾಲ್ ರವರ ಸಾಧನೆ ಈ ಹಂತಕ್ಕೆ ತಲುಪಲು ಕಾರಣಕರ್ತರಾದ ತಂದೆ ಹೆರಾಲ್ಡ್, ತಾಯಿ ಪ್ರೆಸಿಲ್ಲಾ ಮತ್ತು ಸಹೋದರ ನಿಶಾನ್ ರವರನ್ನು ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ಪ್ರಮುಖರಾದ ಜೆರಾಲ್ಡ್ ಪಿರೇರಾ, ಹೆನ್ರಿ ಡಿಸೋಜಾ, ಜೋನ್ ಫೆರ್ನಾಂಡಿಸ್, ವಿಲ್ಫ್ರೆಡ್ ಡಿಸೋಜ, ಜೋನ್ ಗೋಮ್ಸ್, ಅನಿಲ್ ಡಿಸೋಜ, ರೋಯ್ಸ್ ಫೆರ್ನಾಂಡಿಸ್, ಸುನೀಲ್ ಡಿಸೋಜ, ರೋಶನ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.