ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಯಚ್ಚನಹಳ್ಳಿ ಕ್ರಾಸ್ ಸಮೀಪದ ವಿಐಪಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ ದೇಶದ ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ’ ಎಂದರು. ಭಾರತ ಸ್ವಾತಂತ್ರ್ಯಾನಂತರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ದೇಶದ ಬಹುದೊಡ್ಡ ಜನಸಂಖ್ಯೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ನಾಗರಿಕರ ತಲಾದಾಯದಲ್ಲೂ ಹೆಚ್ಚಳವಾಗಿದೆ. ಈ ಪರಿಸ್ಥಿತಿಗೆ ಕಾರಣರಾದ ಸ್ಯಾತಂತ್ರ್ಯ ಹೋರಾಟಗಾರಿಗೆ ನಾವು ಕೃತಜ್ಞರಾಗಿರಬೇಕು ಎಂದು ವಿಐಪಿ ಶಾಲೆಯ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ತಾಲ್ಲೂಕಿನ ಯಚ್ಚನಹಳ್ಳಿ ಕ್ರಾಸ್ ಸಮೀಪದ ವಿಐಪಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನದ ಬಗ್ಗೆ ಅರಿಯಬೇಕು ಎಂದು ಹೇಳಿದರು.
ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಸವಿಯ ಹಿಂದೆ ಲಕ್ಷಾಂತರ ದೇಶ ಪ್ರೇಮಿಗಳ ಶ್ರಮ ಅಡಗಿದೆ. ದೇಶದ ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ದೇಶಪ್ರೇಮ ಪ್ರದರ್ಶಿಸಬೇಕು. ದೇಶದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಸ್ವಾತಂತ್ರ್ಯ ಮತ್ತು ಸಂವಿಧಾನ ಪರಸ್ಪರ ಪೂರಕ. ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿದಾಗ ಮಾತ್ರ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಈಗ ಬ್ರಿಟಿಷರ ಕಾಲದ ಕಾನೂನುಗಳಿಗೆ ಬದಲಾಗಿ, ನಮ್ಮದೇ ಆದ ಹೊಸ ಕಾನೂನು ಜಾರಿಗೆ ಬಂದಿದೆ. ಆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಾನೂನಿಗೆ ವಿರುದ್ಧವಾದ ಯಾವುದೇ ಕೆಸಲ ಮಾಡಬಾರದು. ಯಾರೇ ಆದರೂ ಬೇರೊಬ್ಬರ ಸ್ವಾತಂತ್ರ್ಯ ಕಿತ್ತುಕೊಳ್ಳಲು ಪ್ರಯತ್ನಿಸಬಾರದು. ಕಾನೂನು ಅರಿವು ಇದ್ದಲ್ಲಿ ತೊಂದರೆಗೆ ಒಳಗಾಗಬೇಕಾಗಿ ಬರುವುದಿಲ್ಲ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಾಟಕ, ದೇಶಭಕ್ತಿ ಗೀತೆಗಳ ಗಾಯನ, ವೇಷ ಭೂಷಣ, ನೃತ್ಯ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರೋಣೂರು ಚಂದ್ರಶೇಖರ್, ಪ್ರಾಂಶುಪಾಲ ರಾಜ್ಕುಮಾರ್, ಪ್ರಾಂಶುಪಾಲೆ ಅಸ್ಮಾ ತಬಸಂ ಇದ್ದರು.