ಕೋಲಾರ:- ಏಳನೇ ವೇತನ ಆಯೋಗದ ವರದಿ ಜಾರಿ, ಎನ್‍ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.1 ರಿಂದ ನಡೆಸುತ್ತಿರುವ ಅನಿರ್ಧಿಷ್ಟ ಮುಷ್ಕರಕ್ಕೆ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ತುರ್ತು ಚಿಕಿತ್ಸೆ,ಐಸಿಯು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆ ಮುಂಭಾಗ ಸೋಮವಾರ ಜಿಲ್ಲಾಸ್ಪತ್ರೆಯ ಮುಂಭಾಗ ವೈದ್ಯರು, ಶುಶ್ರೂಷಕರು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ನೌಕರರು ಮುಷ್ಕರಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸಿ ನೌಕರರ ಸಂಘದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಘೋಷಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಐಸಿಯು ಹಾಗೂ ತುರ್ತು ಚಿಕಿತ್ಸೆಗೆ ವಿನಾಯತಿ ನೀಡಿದ್ದು, ಅವರೂ ಸಹಾ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ, ಇದು ನಮ್ಮ ಹಾಗೂ ನಮ್ಮ ಕುಟುಂಬಗಳ ಭವಿಷ್ಯದ ಪ್ರಶ್ನೆಯಾಗಿರುವುದರಿಂದ ಎಲ್ಲಾ ನೌಕರರು ಒಮ್ಮತದಿಂದ ಈ ಹೋರಾಟಕ್ಕೆ ಧುಮುಕಿದ್ದಾರೆ, ಯಾವುದೇ ಒತ್ತಡ,ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದರು.
ಆರೋಗ್ಯ ಇಲಾಖೆ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಅವರು, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಈ ಕಠಿಣ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸಂಘದ ಅಧ್ಯಕ್ಷ ಷಡಕ್ಷರಿ ಸೂಚನೆಯಂತೆ ಎಲ್ಲಾ ಇಲಾಖೆಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 8 ಸಾವಿರ ಚುನಾಯಿತ ಪ್ರತಿನಿಧಿಗಳಿದ್ದ `ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ’ಯಲ್ಲಿ ಮುಷ್ಕರಕ್ಕೆ ನೀಡಿರುವ ಕರೆಗೆ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಸರ್ಕಾರಿ ನೌಕರರು ಒಕ್ಕೊರಲಿನಿಂದ ಸಮ್ಮತಿ ನೀಡಿದ್ದಾರೆ, ಇದು ನಮ್ಮ ಸ್ವಾಭಿಮಾನದ ಬದುಕಿಗಾಗಿ ನಡೆಯುತ್ತಿರುವ ಹೋರಾಟವಾಗಿದ್ದು ಎಲ್ಲರೂ ಪಾಲ್ಗೊಳ್ಳಲು ಕೋರಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ಜುಲೈ 1 ರಿಂದ ರಿಂದ ಪರಿಷ್ಕøತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿ ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40% ಫಿಟ್‍ಮೆಂಟ್ ಸೌಲಭ್ಯವನ್ನು 2022ರ ಜುಲೈ ಒಂದರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ನೌಕರರ ಸಂಘ ಆಗ್ರಹಿಸುತ್ತಿದೆ ಎಂದರು.
ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕ್ಲಿಷ್ಟವಾಗಿದೆ, ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್‍ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದ ಅವರು, 35 ವರ್ಷ ಸರ್ಕಾರಿ ಸೇವೆ ಮಾಡಿದ ನೌಕರರ ನಿವೃತ್ತಿ ಜೀವನ ಅತಂತ್ರವಾಗುವುದನ್ನು ತಪ್ಪಿಸಲು ಒತ್ತಾಯಿಸುತ್ತಿದ್ದೇವೆ ಎಂದರು.
ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್,ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರವು ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‍ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿದ್ದು, ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಸ್ಕøತ ವರದಿ ಸಿದ್ದಪಡಿಸಿ ಸಲ್ಲಿಸಿದ್ದರೂ ಸರ್ಕಾರ ಬಜೆಟ್‍ನಲ್ಲಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಪ್ರಸ್ತಾಪ ಮಾಡದಿರುವುದು ನೋವುಂಟು ಮಾಡಿದೆ ಎಂದರು.
ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷೆ ಹಾಗೂ ನೌಕರರ ಸಂಘದ ಸಹಕಾರ್ಯದರ್ಶಿ ವಿಜಯಮ್ಮ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಡೆಸುತ್ತಿರುವ ಈ ಹೋರಾಟದಲ್ಲಿ ಆರೋಗ್ಯ ಇಲಾಖೆ ನೌಕರರು ಮುಂಚೂಣಿಯಲ್ಲಿರುತ್ತೇವೆ ಯಾವುದೇ ಕಾರಣಕ್ಕೂ ಬೇಡಿಕೆ ಈಡೇರದೇ ಕರ್ತವ್ಯಕ್ಕೆ ತೆರಳದಿರಲು ನಿರ್ಧರಿಸಿದ್ದೇವೆ ಎಂದರು.
ನೌಕರರ ಸಂಘದ ಉಪಾಧ್ಯಕ್ಷ ನಂದೀಶ್, ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ, ನ್ಯಾಯಸಮ್ಮತ ಹಕ್ಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್, ಡಿಹೆಚ್‍ಒ ಡಾ.ಜಗದೀಶ್, ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ,ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್,ಖಜಾಂಚಿ ವಿಜಯ್, ಜಿಲ್ಲಾಸ್ಪತ್ರೆಯ ಆರ್‍ಎಂಒ ಡಾ.ಬಾಲಸುಂದರ್, ಡಾ.ಪುಷ್ಪಲತಾ, ಡಾ.ಶ್ರೀನಾಥ್‍ರೆಡ್ಡಿ, ಡಾ.ಶಿಲ್ಪಶ್ರೀ, ಡಾ.ಅಫೀಸ್, ಆರೋಗ್ಯ ಇಲಾಖೆಯ ಚಂದ್ರಕಲಾ, ಶಿವಾರೆಡ್ಡಿ, ಮುಖ್ಯ ಪ್ರಯೋಗಾಲಯ ತಂತ್ರಜ್ಞ ನಾರಾಯಣಪ್ಪ,ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಮಂಜುನಾಥ್,ಮಹೇಶ್, ಅಬ್ದುಲ್ ಷಫಿ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ,ನೌಕರರ ಸಂಘದ ಅನಿಲ್, ಶ್ರೀರಾಮ್ ಮತ್ತಿತರರು ಹಾಜರಿದ್ದರು.