ಕೋಲಾರ:- ಏಳನೇ ವೇತನ ಆಯೋಗದ ವರದಿ ಜಾರಿ, ಎನ್ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.1 ರಿಂದ ಅನಿರ್ಧಿಷ್ಟ ಮುಷ್ಕರಕ್ಕೆ ಕರೆ ನೀಡಿದ್ದು, ಭವಿಷ್ಯದ ಬದುಕಿಗಾಗಿ ಕರ್ತವ್ಯಕ್ಕೆ ಗೈರಾಗಿ' ಎಂದು ಸರ್ಕಾರಿ ನೌಕರರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ಬಾಬು ಕರೆ ನೀಡಿ, ಸಾರ್ವಜನಿಕರೂ ಸಹಕಾರ ನೀಡಲು ಮನವಿ ಮಾಡಿದರು. ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮುಷ್ಕರದ ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿದ್ದಲ್ಲದೇ ನಂತರ ಪ್ರತಿ ಇಲಾಖೆ ಕಚೇರಿಗೂ ತೆರಳಿ ನೌಕರರಿಗೆ ಕರಪತ್ರ ವಿತರಿಸಿ, ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಅವರು, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಈ ಕಠಿಣ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸಂಘದ ಅಧ್ಯಕ್ಷ ಷಡಕ್ಷರಿ ಸೂಚನೆಯಂತೆ ಎಲ್ಲಾ ಇಲಾಖೆಗಳ, ಶಾಲಾ ಕಾಲೇಜು ಶಿಕ್ಷಕರು, ನೌಕರರು, ವಿಶ್ವವಿದ್ಯಾಲಯ, ನಿಗಮ,ಮಂಡಳಿ ಸಿಬ್ಬಂದಿ ಮಾ.1 ರಿಂದ ಕರ್ತವ್ಯಕ್ಕೆ ಗೈರಾಗುವಂತೆ ಮನವಿ ಮಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 8 ಸಾವಿರ ಚುನಾಯಿತ ಪ್ರತಿನಿಧಿಗಳಿದ್ದ
ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ’ಯಲ್ಲಿ ಮುಷ್ಕರಕ್ಕೆ ನೀಡಿರುವ ಕರೆಗೆ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಸರ್ಕಾರಿ ನೌಕರರು ಒಕ್ಕೊರಲಿನಿಂದ ಸಮ್ಮತಿ ನೀಡಿದ್ದು, ತುರ್ತು ಸೇವೆ, ಐಸಿಯು ಸೇವೆಗಳ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ, ಉಳಿದಂತೆ ಸ್ವಾಭಿಮಾನದ ಬದುಕಿಗಾಗಿ ನಡೆಯುತ್ತಿರುವ ಈ ಮುಷ್ಕರದಲ್ಲಿ ಎಲ್ಲರೂ ಪಾಲ್ಗೊಳ್ಳಲು ಕೋರಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ಜುಲೈ 1 ರಿಂದ ರಿಂದ ಪರಿಷ್ಕøತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿ ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40% ಫಿಟ್ಮೆಂಟ್ ಸೌಲಭ್ಯವನ್ನು 2022ರ ಜುಲೈ ಒಂದರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸುತ್ತಿರುವುದಾಗಿ ತಿಳಿಸಿದರು.
ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕ್ಲಿಷ್ಟವಾಗಿದೆ, ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವವರೂ ನಾವೇ, ಈ ಬಜೆಟ್ ಸಿದ್ದಪಡಿಸಿರುವುದು ನೌಕರರೇ ಆದರೆ ರಾಜ್ಯದ 2023-24ನೇ ಸಾಲಿನ ಆಯ-ವ್ಯಯದಲ್ಲಿ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಅತ್ಯಂತ ನೋವುಂಟು ಮಾಡಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರವು ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿದ್ದು, ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಸ್ತøತ ವರದಿ ಸಿದ್ದಪಡಿಸಿ ಸಲ್ಲಿಸಿದ್ದರೂ ಸರ್ಕಾರ ಬಜೆಟ್ನಲ್ಲಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಪ್ರಸ್ತಾಪ ಮಾಡದಿರುವುದು ನೌಕರರ ಆಕ್ರೋಷಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ, ನ್ಯಾಯಸಮ್ಮತ ಹಕ್ಕಾಗಿದೆ ಎಂದರು.
ಈ ಹಿನ್ನಲೆಯಲ್ಲಿ ಮಾ.1 ರಿಂದ ರಾಜ್ಯ ಸಂಘದ ನಿರ್ದೇಶನದಂತೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ `ಅನಿರ್ಧಿಷ್ಟಾವಧಿ ಮುಷ್ಕರ’ವನ್ನು ಬೆಂಬಲಿಸುವುದೊಂದರಿಗೆ ಯಶಸ್ವಿಗೊಳಿಸಿ, ಯಾವುದೇ ಒತ್ತಡಕ್ಕೆ ಮಣಿಯದಿರಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ವಿಮಾಧಿಕಾರಿ ಶ್ರೀನಿವಾಸ್,ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ಕುಮಾರ್,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ಹಾಲಿ ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಮಂಜುನಾಥ್,ಪದಾಧಿಕಾರಿಗಳಾದ ಕೋರ್ಟ್ ನಾಗರಾಜ್, ಪಿಡಿಒ ನಾಗರಾಜ್, ಕದಿರಪ್ಪ, ಶ್ರೀನಿವಾಸಲು,ಚೆನ್ನಪ್ಪ, ಎಡಿಎಲ್ಆರ್ ಮೇರಿ ಒರೋನಿಕಾ, ಅಧೀಕ್ಷಕ ಚಂದ್ರಶೇಖರ್,ನಮ್ರತಾ,ಶೋಭಾ,ಸಂಧ್ಯ, ವಿಜಿ, ಕೆಜಿಐಡಿ ಮುರಳಿ, ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಾರುತಿಕುಮಾರ್ ಸೇರಿದಂತೆ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಸಿಬ್ಬಂದಿ ಹಾಜರಿದ್ದರು.