ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಇತ್ತೀಚಿಗೆ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗಿದ್ದು ಕಿವಿಯ ತಮಟೆಗೆ ಹೆಚ್ಚು ಅಪಾಯಕಾರಿ ಇರುವುದರಿಂದ ಶ್ರವಣಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್. ಸೆಲ್ವಮಣಿ ಅವರು ತಿಳಿಸಿದರು .
ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು . ಪಂಚೇದ್ರಿಯಗಳಲ್ಲಿ ಕಿವಿಗಳು ಪ್ರಮುಖ ಅಂಗಗಳಾಗಿದ್ದು ಅವುಗಳ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು . ಹಿಂದಿನ ಕಾಲದಿಂದಲೂ ಹಾಗೂ ಇವತ್ತಿಗೂ ಸಹ ಕಿವಿ ನೋವು ಎಂದರೆ ಮೂಢನಂಬಿಕೆಗಳಾದ ಕಿವಿಗೆ ಬಿಸಿ ಎಣ್ಣೆ ಬಿಡುವುದು . ಕೋಳಿ ಪುಕ್ಕಗಳನ್ನು ಕಿವಿಯೊಳಗೆ ಇಡುವುದು . ಬಿಟ್ಟು ಅದಕ್ಕೆ ನುರಿತ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು . ಮನೆಗಳಲ್ಲಿ ಆಧುನಿಕ ಸೌಂಡ್ ಬಾಕ್ಸ್ , ಟಿ.ವಿ ಹಾಗೂ ಮೊಟರ್‌ಗಳ ಶಬ್ದಗಳಿಂದ ಅತಿ ಬೇಗ ಶ್ರವಣಗಳಿಗೆ ಅದರಲ್ಲೂ ಚಿಕ್ಕಮಕ್ಕಳ ಶ್ರವಣಕ್ಕೆ ತೊಂದರೆ ಆಗುವುದರಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಿ ಎಂದು ಕಿವಿಮಾತು ಹೇಳಿದರು . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ | ಜಗದೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ , ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಶ್ರವಣದ ದೋಶವಿದ್ದರೆ ಅದನ್ನು ಗುರುತಿಸಿ ಚಿಕಿತ್ಸೆ ಕೊಡಿಸಬೇಕು . ಮಕ್ಕಳಿಗೆ ಕಿವಿಗಳ ಸಂರಕ್ಷಣೆಯ ಬಗ್ಗೆ ತಿಳಿ ಹೇಳಬೇಕು . ಕೆಲವು ಬಾರಿ ಸಕ್ಕರೆ ಕಾಯಿಲೆ ಇದ್ದರೆ ಶ್ರವಣಕ್ಕೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ . ಆದ್ದರಿಂದ ಆದಷ್ಟು ಬೇಗ ನೂನ್ಯತೆಯನ್ನು ಗುರುತಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು . ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ || ಚಂದನ್ ಅವರು ಶ್ರವಣ ದೋಷ ಎಂಬುದು ಚಿಕ್ಕ ವಿಷಯ ಆದರೂ ಅದನ್ನು ನಿರ್ಲಕ್ಷಿಸಬಾರದು . ಅದಕ್ಕೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು . ಶ್ರವಣ ದಿನಾಚರಣೆಯನ್ನು ಭಾರತ ಸರ್ಕಾರ 2007 ರಲ್ಲಿ ಪ್ರಾರಂಭ ಮಾಡಿತು . 2020-21ರ ವೇಳೆಗೆ ಡಬ್ಬೊಹೆಚ್ಒ ಪ್ರಕಾರ ಶೇ . 8 ರಿಂದ 9 ರಷ್ಟು ಜನ ಶ್ರವಣ ದೋಷ ತೊಂದರೆಯನ್ನು ಅನುಭವಿಸುತ್ತಿದ್ದಾರೆ . ಜನರಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ . “ ಎಲ್ಲರಿಗೂ ಶ್ರವಣದ ಆರೈಕೆ ” ಈ ವರ್ಷದ ಘೋಷನೆಯಾಗಿದೆ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಂ.ಜಿ.ಪಾಲಿ ಹಾಗೂ ಕಿವಿ ಮತ್ತು ಗಂಟಲು ವೈದ್ಯರಾದ ಡಾ | ಪುಷ್ಪಲತ , ಡಾ |ಕಮಲ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು .