ಶ್ರೀನಿವಾಸಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿ ಕೀರ್ತಿ ರಾಜ್ಯ ಬಿಜೆಪಿಸರ್ಕಾರಕ್ಕೆ ಸೇರುತ್ತದೆ ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ತಾಲ್ಲೂಕು ಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದಶಕಗಳ ಕಾಲ ಆಳಿದ ಕಾಂಗ್ರೆಸ್ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಕೈ ಹಾಕಲಿಲ್ಲ. ಬಿಜೆಪಿ ಅದನ್ನು ಮಾಡಿ ತೋರಿಸಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 35 ಸಾವಿರ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 40 ಸಾವಿರ ಜನಸಂಖ್ಯೆ ಇದೆ. ಬದಲಾದ ಪರಿಸ್ಥಿತಿಯಲ್ಲಿ ಇವರು ಬಿಜೆಪಿ ಪರ ಇದ್ದಾರೆ. ಸರ್ಕಾರ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮೀಸಲಾತಿ ಬೇಡಿಕೆಯನ್ನು ಈಡೇರಿಸಿದ್ದು ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಹಾಗಾಗಿ ವಾಲ್ಮೀಕಿ ಜನಾಂಗ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಬಿಜೆಪಿ ಸರ್ಕಾರಕ್ಕೆ ಋಣಿಯಾಗಿರುತ್ತದೆ. ಬಳ್ಳಾರಿಯಲ್ಲಿ ನ.20 ರಂದು ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಪರಿಶಿಷ್ಟ ಪಂಗಡ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಶಿವಪುರ ಶಾಸಕ ರಾಜುಗೌಡ ಮಾತನಾಡಿ, ಶ್ರೀರಾಮನ ಸಿದ್ಧಾಂತ ಬಿಜೆಪಿಯದು, ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಆದರ್ಶ ನಮ್ಮದು. ಕಾಂಗ್ರೆಸ್‍ಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿ ಕುರಿತು ಕಾಳಜಿ ಇಲ್ಲ. ಕಾಂಗ್ರೆಸ್ ದ್ರೋಣಾಚಾರ್ಯ ಇದ್ದಂತೆ. ಬಿಜೆಪಿ ವಾಲ್ಮೀಕಿ ಸಮುದಾಯಕ್ಕೆ ಶಕ್ತಿ ನೀಡಿದೆ. ವಾಲ್ಮೀಕಿ ಸಮುದಾಯದ ಹಲವು ಮುಖಂಡರಿಗೆ ಸರ್ಕಾರದಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಮುಖಂಡರಾದ ಕೇಶವಪ್ರಸಾದ್, ನರಸಿಂಹನಾಯಕ್, ಮಂಜುನಾಥಗೌಡ, ಜಯಚಂದ್ರಾರೆಡ್ಡಿ, ಎಂ.ನಾರಾಯಣಸ್ವಾಮಿ, ಕೃಷ್ಣಮೂರ್ತಿ, ವಾಸುದೇವ್, ಎಸ್‍ಎಲ್‍ಎನ್ ಮಂಜುನಾಥ್, ಅಶ್ವತ್ಥರೆಡ್ಡಿ, ವೆಂಕಟೇಗೌಡ, ಹನುಮಂತಪ್ಪ, ಅಂಬರೀಶ್, ಆಂಜಿನಪ್ಪ, ನರಸಿಂಹಯ್ಯ, ಕೃಷ್ಣಪ್ಪ, ಹರೀಶ್ ನಾಯಕ್, ನಾರಾಯಣಪ್ಪ, ಗೋವಿಂದಸ್ವಾಮಿ, ಮಮತ, ಅರುಣಮ್ಮ, ವಿ.ನಿಶಾಂತ್, ಜೆಸಿಬಿ ಅಶೋಕ್ ರೆಡ್ಡಿ, ಎ.ಅಶೋಕ್ ಇದ್ದರು