JANNUDI.COM NETWORK
ನವದೆಹಲಿ, ಸೆ.1: ಕೊರೊನಾ ಸಾಂಕ್ರಾಮಿಕದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಬಡ ಜನರಿಗೆ ಬರೆ ಎಳೆಯುವ ಬಿಸಿ ಸುದ್ದಿ ಪ್ರಕಟವಾಗಿದೆ.. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್ 01ರಿಂದ ಅಡುಗೆ ಅನಿಲ ಪ್ರತಿ ಸಿಲಿಂಡರ್ ಮೇಲೆ ಜನರು ಹೆಚ್ಚುವರಿ 25 ರು ತೆರಬೇಕಾಗುತ್ತದೆ.
ಪರಿಷ್ಕೃತ ದರ ಪಟ್ಟಿ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಹೇಳಿವೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದಲ್ಲದೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 75 ರೂ. ನಷ್ಟು ಏರಿಸಲಾಗಿದೆ.
ಮೇ 1, 2014ರಲ್ಲಿ 410.50 ರು ಇದ್ದ ಸಿಲಿಂಡರ್ ಬೆಲೆ ದ್ವಿಗುಣವಾಗಿ ಈಗ ಸರಾಸರಿ 859.50 ರು ನಷ್ಟಾಗಿದೆ.
2021ರ ಫೆಬ್ರವರಿ ತಿಂಗಳಲ್ಲಿ 100 ರು ಏರಿಕೆ ಮಾಡಲಾಗಿತ್ತು. ಫೆಬ್ರವರಿ 4, ಫೆ.14 ಹಾಗೂ ಫೆ.25ರಂದು ಎಲ್ಪಿಜಿ ಸಿಲಿಂಡರ್ ದರ ಏರಿಕೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಮೂರು ಬಾರಿ ಬೆಲೆ ಹೆಚ್ಚಳ ಮಾಡಿ ದಾಖಲೆ ಬರೆಯಲಾಗಿದೆ.
2020ರ ಡಿಸೆಂಬರ್ ತಿಂಗಳಿನಿಂದ 200 ರು ಪ್ರತಿ ಸಿಲಿಂಡರ್ ನಂತೆ ಏರಿಕೆ ಕಂಡಿತ್ತು. ಕಳೆದ ನವೆಂಬರ್ ತಿಂಗಳಿನಿಂದಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಭಾರತದಲ್ಲಿಯೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕಂಡಿತ್ತು. ಪೆಟ್ರೋಲ್, ಡೀಸೆಲ್ ದರ ಸೇರಿದಂತೆ ಎಲ್ಪಿಜಿ ಸಿಲಿಂಡರ್ ದರದಲ್ಲಿಯೂ ಏರಿಕೆ ಮಾಡಲಾಗಿತ್ತು..
ಒಟ್ಟಾರೆ ಈ ವರ್ಷ ಜನವರಿ 1, 2021ರಿಂದ ಸೆಪ್ಟೆಂಬರ್ 1, 2021 ಅವಧಿಯಲ್ಲಿ 190 ರು ನಷ್ಟು ಬೆಲೆ ಏರಿಕೆಯಾಗಿದೆ.