ಗಂಗೊಳ್ಳಿ: ಕೊಸೆಸಾಂವ್ ಅಮ್ಮನವರ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣದ ವರ್ಷದ ಉದ್ಘಾಟನೆ ಜೂನ್ 9 ರಂದು ನಡೆಯಿತು. ಪ್ರಧಾನ ಧರ್ಮಗುರುಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಕ್ರೈಸ್ತ ಶಿಕ್ಷಣ ಆಯೋಗದ ನಿರ್ದೇಶಕರಾದ ವಂದನೀಯ ಸಿರಿಲ್ ಲೋಬೊ ಮತ್ತು ಗಂಗೊಳ್ಳಿ ಇಗರ್ಜಿಯ ಧರ್ಮಗುರು ತೋಮಸ್ ರೋಶನ್ ಡಿಸೋಜ ಇವರು ಪ್ರವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
ಪ್ರಾರಂಭದಲ್ಲಿ ಪವಿತ್ರ ಬೈಬಲನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಟಾಪಿಸಿ, ಬೈಬಲಿಗೆ ಪುಷ್ಪಾಹಾರವನ್ನು ಅರ್ಪಿಸಿದರು. ತದನಂತರ ಇಗರ್ಜಿಯ ಧರ್ಮಗುರುಗಳು ಧ್ಯೇಯವಾಕ್ಯ “ಕ್ರಿಸ್ತಾಂವ್ ಶಿಕ್ಷಣಾಚೆಂ ಬಳ್ ; ಕರ್ತಾ ಮಾಗ್ಣೆಂ ಸುಫಳ್ ” ವನ್ನು ಉದ್ಘಾಟಿಸಿದರು. ಕ್ರೈಸ್ತ ಶಿಕ್ಷಣದ ಸಂಚಾಲಕಿ ಫೆಲ್ಸಿ ಡಿ’ಸಿಲ್ವ, ಪೋಷಕರ ಪರವಾಗಿ ವಿಜಯ್ ಸಿಲ್ವ ಮತ್ತು ನಿರ್ಮಲ ಸಿಲ್ವ, ಶಿಕ್ಷಕರ ಪರವಾಗಿ ಧರ್ಮಭಗಿನಿ ಸನಿಶಾ ಎ.ಸಿ., ಮತ್ತು ಮಕ್ಕಳ ಪರವಾಗಿ ರಿಶೆಲ್ ಡಿಸೋಜ ಇವರು ದೀಪ ಬೆಳಗಿಸಿದರು. ನಂತರ ಎಲ್ಲಾ ಶಿಕ್ಷಕ ಶಿಕ್ಷಕಿಯರು ಪ್ರತಿಜ್ಞಾ ಸ್ವೀಕಾರ ಮಾಡಿದರು.
ನಂತರ ಇಗರ್ಜಿಯ ಸಭಾಂಗಣದಲ್ಲಿ ಧರ್ಮಗುರು ಸಿರಿಲ್ ಲೋಬೊ, ನಿರ್ದೇಶಕರು ದಿವ್ಯಜ್ಯೋತಿ, ಉಡುಪಿ, ಇವರು “ಮಕ್ಕಳ ಕ್ರೈಸ್ತ ಶಿಕ್ಷಣದಲ್ಲಿ ಪೋಷಕರ ಪಾತ್ರವೇನು?” ಎಂಬ ವಿಷಯದಲ್ಲಿ ವಿಚಾರಗೋಷ್ಟಿ ನಡೆಸಿದರು. ಗಂಗೊಳ್ಳಿ ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿ’ಸೋಜ ಇವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಡಿಸೋಜ, 20 ಆಯೋಗದ ಸಂಯೋಜಕಿ ರೆನಿಟಾ ಬಾರ್ನೆಸ್ ಮತ್ತು ಅಧಿಕ ಸಂಖ್ಯೆಯಲ್ಲಿ ಮಕ್ಕಳ ಪೋಷಕರು ಹಾಜರಾಗಿದ್ದರು. ಶಿಕ್ಷಕಿ ಫಿಲೋಮಿನಾ ಒಲಿವೇರಾರವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ವನ್ನು ನಿರೂಪಿಸಿದರು. ಫೆಲ್ಸಿ ಡಿಸಿಲ್ವರವರು ವಂದನಾರ್ಪಣೆ ಸಲ್ಲಿಸಿದರು.