ಶ್ರೀನಿವಾಸಪುರ : ನಗರ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ , ಕೆ.ಜಿ.ಎಫ್ ಹಾಗೂ ಮಾಲೂರು ಪಟ್ಟಣಗಳಲ್ಲಿ ಏಕಕಾಲಕ್ಕೆ ನಮ್ಮ ಕ್ಲಿನಿಕ್ ಗಳನ್ನು ಉದ್ಘಾಟನೆ ಮಾಡಲಾಯಿತು.
ಶ್ರೀನಿವಾಸಪುರದಲ್ಲಿ ಜಿಲ್ಲಾ ಮಟ್ಟದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗಫರ್ ಖಾನ್ ಮೊಹಲ್ಲಾದಲ್ಲಿ ಹೊಸದಾಗಿ ನಮ್ಮ ಕ್ಲಿನಿಕ್ನ್ನು ಪುರಸಭೆ ಅಧ್ಯಕ್ಷರಾದ ಲಲಿತ ಶ್ರೀನಿವಾಸ್ ಉದ್ಘಾಟನೆ ಮಾಡಿದರು.
ರಾಜ್ಯಾದ್ಯಂತ 438 ಕ್ಲಿನಿಕ್ಗಳನ್ನು ಏಕಕಾಲಕ್ಕೆ ವರ್ಚುವಲ್ ಮೂಲಕ ಸನ್ಮಾನ್ಯ ಮುಖ್ಯ ಮಂತ್ರಿಗಳು ಉದ್ಘಾಟಿಸಿದರು. ಸ್ಥಳೀಯವಾಗಿ ಶ್ರೀನಿವಾಸಪುರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿತ್ತು .
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ವಿಜಯಲಕ್ಷ್ಮಿ ರವರು ನಮ್ಮ ಕ್ಲಿನಿಕ್ನ ಬಗ್ಗೆ ಸವಿವರವಾಗಿ ತಿಳಿಸಿದರು.
ನಗರ ಪ್ರದೇಶಗಳ ಬಡ ಜನತೆಗೆ ನಮ್ಮ ಕ್ಲಿನಿಕ್ಗಳು 12 ಆರೋಗ್ಯ ಸೇವೆಗಳ ಮೂಲಕ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು , ನಿರಂತರ ಆರೈಕೆಯನ್ನು ನೀಡುವ ನಿಟ್ಟಿನಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಕೇಂದ್ರಗಳಿಗೆ ರೆಫರಲ್ ಸೇವೆಗಳನ್ನು ಒದಗಿಸುವ ಮೂಲಕ , ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸುಧಾರಿಸಲು ಸೂಕ್ತವಾದ ಕಾರ್ಯವಿಧಾನಗಳನ್ನು ಬಲಪಡಿಸಲು ಹಾಗೂ ಸಮುದಾಯದ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ನಮ್ಮ ಕ್ಲಿನಿಕ್ಗಳು ಸಹಾಯಕಾರಿಯಾಗಲಿದೆ ಎಂದು ಹೇಳಿದರು.
ಕುಟುಂಬ ಕಲ್ಯಾಣಧಿಕಾರಿಗಳಾದ ಚಂದನ್ ಕುಮಾರ್ ಮಾತನಾಡಿ ಇಲ್ಲಿ ನಿರೀಕ್ಷಣಾ ಸ್ಥಳ , ಹೊರ ರೋಗಿಗಳ ಕೊಠಡಿ , ಚುಚ್ಚು ಮದ್ದು ನೀಡುವ ಕೊಠಡಿ , ಪ್ರಯೋಗಶಾಲೆ , ಯೋಗ ಕೂಠಡಿ , ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ , ಆಡಳಿತ ಕಛೇರಿ , ಹೀಗೆ ಪ್ರತ್ಯೇಕ ಕೊಠಡಿಗಳಿದ್ದು ಆಸ್ಪತ್ರೆ ಸಿಬ್ಬಂದಿ , ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ .
ನಮ್ಮ ಕ್ಲಿನಿಕ್ಗಳಲ್ಲಿ ಒಬ್ಬರು ವೈದ್ಯಾಧಿಕಾರಿ , ಒಬ್ಬರು ಶುಕ್ರೂಷಕರು , ತಲಾ ಒಬ್ಬೊಬ್ಬ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಕಿರಿಯ ದರ್ಜೆ ಸಹಾಯಕರು ,ಒಬ್ಬರು ಡಿ ದರ್ಜೆ ನೌಕರರು ಕಾರ್ಯನಿರ್ವಹಿಸಲಿದ್ದಾರೆ . ನಮ್ಮ ಕ್ಲಿನಿಕ್ಗಳು ಬೆಳಗ್ಗೆ 9 ರಿಂದ ಸಂಜೆ 4-30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.
ನಮ್ಮ ಕ್ಲಿನಿಕ್ಗಳಲ್ಲಿ 12 ಪ್ರಮುಖ ಆರೋಗ್ಯ ಸೇವೆಗಳನ್ನು ನೀಡುವುದರ ಜೊತೆಗೆ ಈ ಕೆಳಕಂಡ ಸೇವೆಗಳನ್ನು ನೀಡಲಾಗುತ್ತದೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ , ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ , ಆರೈಕೆ , ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು ಸಾರ್ವತ್ರಿಕ ಲಸಿಕಾ ಸೇವೆಗಳು , ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೈಕೆ ಕೇಂದ್ರಗಳು , ಸಾಂಕ್ರಾಮಿಕ ರೋಗಗಳ ನಿರ್ವಹಣೆ , ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರ ರೋಗಿ ಸೇವೆಗಳು , ಸಾಂಕ್ರಾಮಿಕ ಟಿ. ಬಿ. , ಕುಷ್ಟ ರೋಗ ಇತ್ಯಾದಿ ಮತ್ತು ಅಸಾಂಕ್ರಾಮಿಕ ರೋಗಗಳ ಮಧುಮೇಹ ದೀರ್ಘಾವಧಿ ಶ್ವಾಸಕೋಶ ಕಾಯಿಲೆ , ಕೀಲು ನೋವು ಮತ್ತು ಸಂಧಿವಾತ , ಸ್ತನ ಮತ್ತು ಗರ್ಭಕಂತ ಕ್ಯಾನ್ಸರ್ , ಸೀನಿಂಗ್ , ತಡೆಗಟ್ಟುವಿಕೆ ಮತ್ತು ನಿರ್ವಹಣೆ , ಮೂಲಭೂತ ಬಾಯಿ ಆರೋಗ್ಯ ಸೇವೆಗಳು , ಮೂಲಭೂತ ನೇತ್ರ ಹಾಗೂ ಕಿವಿ , ಮೂಗು , ಗಂಟಲು ಆರೋಗ್ಯ ಆರೈಕೆ ಸೇವೆಗಳು , ಮಾನಸಿಕ ಆರೋಗ್ಯದ ಮೂಲಭೂತ ಸೀನಿಂಗ್ ಸೇವೆಗಳು , ಮೂಲಭೂತ ವೃದ್ಧಾಪ್ಯ ಆರೈಕೆ ಮತ್ತು ಉಪಶಮನಕಾರಿ ಆರೈಕೆ ಸೇವೆಗಳು , ಸುಟ್ಟ ಗಾಯಗಳು , ಅಪಘಾತ , ಮತ್ತಿತರ ಗಾಯಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು , ಉಚಿತ ಆರೋಗ್ಯ ತಪಾಸಣೆ , ಉಚಿತ ಔಷಧ , ಉಚಿತ ಪ್ರಯೋಗಶಾಲಾ ಸೇವೆಗಳು ರಕ್ತ ಹೀನತೆ , ಸಕ್ಕರೆ ಕಾಯಿಲೆ , ಮೂತ್ರ ಪರೀಕ್ಷೆ , ಕ್ಷಯ ಪರೀಕ್ಷೆ , ಡೆಂಗಿ , ಮಲೇರಿಯಾದಂತಹ ಕನಿಷ್ಠ 14 ಪರೀಕ್ಷೆಗಳ ಸೇವೆಯನ್ನು ನೀಡಲಾಗುತ್ತದೆ ಎಂದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷರಾದ ಆಯೇಷಾ ನಯಾಜ್ , ಸದಸ್ಯರಾದ ರಸೂಲ್ ಖಾನ್ , ತಾಲ್ಲೂಕು ಆರೋಗ್ಯಧಿಕಾರಿಗಳಾದ ವಿಶ್ವನಾಥಾರೆಡ್ಡಿ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ || ಕಮಲಮ್ಮ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ || ಚಾರಿಣಿ , ಡಾ || ಅಂರೀನ್ ,
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು .