ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟಿಸಿದ ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ನೂತನ ಕಟ್ಟಡ ನಿರ್ಮಾಣಕ್ಕೆ ಕೋಚಿಮುಲ್‍ನಿಂದ 13.5 ಲಕ್ಷ ರೂ ಬಿಡುಗಡೆ ಮಾಡಿಸುವುದಾಗಿಯೂ ಮತ್ತು ಗಣಕಯಂತ್ರ ಸೌಲಭ್ಯ ಒದಗಿಸುವುದಾಗಿಯೂ ಭರವಸೆ ನೀಡಿದರು.
ತಾಲ್ಲೂಕಿನ ಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈನೋದ್ಯಮದಲ್ಲಿ ಪರಿಶ್ರಮ ಮಹಿಳೆಯರದ್ದೇ ಆಗಿದೆ, ಇಂದು ಕೋಲಾರ ಜಿಲ್ಲೆಯ ಹೈನೋದ್ಯಮದ ಸಾಧನೆಗೆ ತಾಯಂದಿರೇ ಕಾರಣ ಎಂದರು.
ಸಹಕಾರ ರಂಗದಲ್ಲಿ ಮಹಿಳೆಯರು ಎಲೆಮರೆಯ ಕಾಯಂತೆ ಪರಿಶ್ರಮ ಹಾಕುತ್ತಿದ್ದಾರೆ ಆದರೆ ಸದಸ್ಯತ್ವ ಗಮನಿಸದಾಗ ಪುರುಷರದ್ದೆ ಕಾರುಬಾರು ಎಂದ ಅವರು, ಸಹಕಾರ ಸಂಘಗಳನ್ನು ಸಮರ್ಥವಾಗಿ ನಡೆಸುವ ಮೂಲಕ ತಾಯಂದಿರು ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದರು.
ಗುಣಮಟ್ಟದ ಹಾಲು ಸಂಗ್ರಹಕ್ಕೆ ಒತ್ತು ನೀಡಿ ಎಂದು ಸಲಹೆ ನೀಡಿದ ಅವರು, ಸಂಘಗಳಲ್ಲಿ ಗುಣಮಟ್ಟಕ್ಕೆ ತಕ್ಕೆಂತೆ ದರ ನೀಡುವುದರಿಂದ ಉತ್ಪಾದಕರಿಗೆ ಹೆಚ್ಚಿನ ಧರ ಸಿಗುತ್ತದೆಂದು ತಿಳಿಸಿದರು. ಹಾಗೂ ಒಕ್ಕೂಟದಿಂದ ವರ್ಷಕ್ಕೆ ಎರಡು ಸಲ ಗುಂಪು ವಿಮೆ ಮಾಡುವುದರಿಂದ ಪ್ರತಿಯೊಬ್ಬರು ತಪ್ಪದೇ ತಮ್ಮ ಹಸುಗಳಿಗೆ ವಿಮೆ ಮಾಡಿಸಲು ಸೂಚಿಸಿದರು.
ತಾಲ್ಲೂಕಿನಲ್ಲಿ ಒಟ್ಟಾರೆಯಾಗಿ ತಮ್ಮೆಲ್ಲರ ಸಹಕಾರದಿಂದ ದಿನಂಪ್ರತಿ 1 ಲಕ್ಷ 45ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು ಸಂತಸದ ವಿಷಯವೆಂದು ತಿಳಿಸಿ, ಗುಣಮಟ್ಟದಲ್ಲಿ ತಾಲ್ಲೂಕನ್ನು ಪ್ರಥಮ ಸ್ಥಾನಕ್ಕೆ ಕೊಂಡ್ಯೂಯಲು ಮಹಿಳೆಯರ ಸಹಕಾರ ಅಗತ್ಯವಿದೆ ಎಂದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹೆಚ್.ಸುನಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಮಹಿಳೆಯರಿಗಿದೆ, ರಾಸುಗಳ ಸಾಕಾಣೆ, ಸ್ವಚ್ಚತೆ ಕಾಪಾಡುವುದು, ಹಾಲು ಕರೆಯುವುದು ಎಲ್ಲವೂ ಮಹಿಳೆಯರೇ ನಿರ್ವಹಿಸುತ್ತಾರೆ ಅದೇ ರೀತಿ ಸಹಕಾರ ಸಂಘದ ಸದಸ್ಯತ್ವವನ್ನು ಪಡೆಯುವ ಮೂಲಕ ನಮ್ಮ ಗ್ರಾಮದ ಸಂಘ ಮಾದರಿಯಾಗಿದೆ ಎಂದರು.
ಕೋಚಿಮುಲ್‍ನ ಮಹಿಳಾ ನಿರ್ದೇಶಕಿ ಕಾಂತಮ್ಮ ಮಹಿಳೆಯರು ನಡೆಸುವ ಸಂಘದಲ್ಲಿ ಅವ್ಯವಹಾರಗಳಿಗೆ ಆಸ್ಪದ ಇರುವುದಿಲ್ಲ, ಇದಕ್ಕೆ ಎಷ್ಟೋ ನಿದರ್ಶನಗಳಿವೆ, ಮೇಡಿತಂಬಿಹಳ್ಳಿ ಸಂಘವೂ ಉತ್ತಮ ನಿರ್ವಹಣೆಯ ಮೂಲಕ ಜಿಲ್ಲೆಗೆ ಮಾದರಿಯಾಗಲಿ ಎಂದು ಆಶಿಸಿದರು.
ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಮಹೇಶ್, ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಿಕೊಟ್ಟು, ಸಂಘದ ಬಲವರ್ಧನೆಗೆ ಎಲ್ಲಾ ರೀತಿಯ ಸಹಕಾರದ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಎಂ.ಗೋಪಾಲಪ್ಪ, ಕೋಚಿಮುಲ್ ವಿಸ್ತರಣಾಧಿಕಾರಿ ಎಸ್.ನಾಗಪ್ಪ, ಮೇಡಿತಂಬಿಹಳ್ಳಿ ಸಹಕಾರ ಸಂಘದ ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ಗೀತಾ, ಪಾರ್ವತಮ್ಮ, ಮಜುಳಾ,ಸವಿತಮ್ಮ, ಸಾವಿತ್ರಮ್ಮ, ಜಿ.ಮಾಲಾ, ರತ್ನಮ್ಮ, ವಿಮಲಮ್ಮ,ನೀಲಮ್ಮ,ರತ್ನಮ್ಮ ಮತ್ತಿತರರಿದ್ದರು.