ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸಂಗೀತವನ್ನು ಒಂದರಿಂದ ಹತ್ತನೇ ತರಗತಿಯ ಪಠ್ಯಭಾಗವಾಗಿಸಿ ಕಡ್ಡಾಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಯುವಂತೆ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ
ಕೆ.ಎಸ್.ಗಣೇಶ್ ಹೇಳಿದರು . ಗಾಯಿತಿ ಸಂಗೀತ ಕಲಾ ನಿಕೇತನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಗರದ ಥಿಯೋಸಫಿಕಲ್ ಸೊಸೈಟಿಯಲ್ಲಿ ಭಾನುವಾರ ಮಧ್ಯಾಹ್ನ ಆಯೋಜಿಸಿದ್ದ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಹಿಂದೆ ಸಂಗೀತವನ್ನು ಗುರುಕುಲ ಪದ್ಧತಿಯ ಮೂಲಕ ಕಲಿಸಲಾಗುತ್ತಿತ್ತು , ಆದರೆ , ಇತ್ತೀಚಿನ ದಿನಗಳಲ್ಲಿ ಗುರುಕುಲಪದ್ಧತಿ ಮಾಯವಾಗಿ ಸಂಗೀತ ಕಲಿಸುವ ಮತ್ತು ಕಲಿಯುವ ಪರಂಪರೆ ನಶಿಸುತ್ತಿರುವುದರಿಂದ ಸಂಗೀತ ಕಲಿಕೆಯನ್ನು ಪಠ್ಯಭಾಗವಾಗಿಸಬೇಕಾಗಿದೆಯೆಂದು ಪ್ರತಿಪಾದಿಸಿದರು . ಸಂಗೀತ ಕಲಿಕೆಯಿಂದ ಶರೀರ ಮತ್ತು ಶಾರೀರಕ ದೃಢತೆ ಸಾಧ್ಯವಿದ್ದು , ಸತತ ಅಭ್ಯಾಸ ನಿರಂತರ ಕಲಿಕೆಯಿಂದ ಸಂಗೀತದಲ್ಲಿ ಪರಿಣಿತಿಗಳಿಸಬಹುದು , ಸಂಗೀತಾಭ್ಯಾಸದಿಂದ ಶ್ವಾಸಕೋಶಗಳು ಬಲಗೊಳ್ಳುವುದರಿಂದ ಉಸಿರಾಟದ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂದರು . ರಾಷ್ಟ್ರಪತಿ ಪದಕ ಪಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ವಂದೇ ಮಾತರಂ ಸೋಮಶಂಕರ್ ಮಾತನಾಡಿ , ಭಾರತವೆಂದರೇನೆ ಭಾವ , ರಾಗ ಮತ್ತು ತಾಳಗಳ ಸಮ್ಮಿಲನ ಎಂದರು . ಸಂಗೀತವು ವೇದಗಳ ಕಾಲದಿಂದಲೂ ಇದ್ದು , ಸಾಮವೇದ ಸಂಗೀತದ ಉಗಮವಾಗಿದೆ . ಸಂಗೀತವನ್ನು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಪ್ರತಿಯೊಬ್ಬರೂ ಕಲಿಯಬೇಕೆಂದು ಹೇಳಿದರು .
ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯ ಎಸ್.ಎನ್.ಭಾಸ್ಕರ್ ಮಾತನಾಡಿ , ಸಂಗೀತವು ಓಂಕಾರ ಪ್ರಣವ ಸ್ವರೂಪಿಯಾಗಿದೆ , ಜೀವನ ಕೌಶಲ್ಯ ಕಲಿಯಲು ಮತ್ತು ಒತ್ತಡಗಳನ್ನು ಎದುರಿಸಲು ಸಹಕಾರಿಯಾಗಿದೆ , ಆಧ್ಯಾತ್ಮಿಕ ವಿಕಸನಕ್ಕೂ ಸಂಗೀತ ಉಪಕಾರಿ ಎಂದರು . ಅಧ್ಯಕ್ಷತೆಯನ್ನು ಕೋಲಾರ ಥಿಯಾಸಫಿಕಲ್ ಸೊಸೈಟಿ ಅಧ್ಯಕ್ಷ ಬಿ.ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದು , ವೇದಿಕೆಯಲ್ಲಿ ರೆಡ್ಡಿ , ಜಯಶ್ರೀ , ಅರುಣಜ್ಯೋತಿ , ವೆಂಕಟರಮಣಪ್ಪ ಇತರರು ಹಾಜರಿದ್ದರು . ಇದೇ ಸಂದರ್ಭದಲ್ಲಿ ವಿದ್ವಾನ್ ಎನ್.ಶ್ರೀನಿವಾಸಲು ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು . ಪಿ.ಜೆ.ಬ್ರಹ್ಮಾಚಾರಿ ವೈಯಲಿನ್ , ಕೆ.ಕೆ.ಭಾನುಪ್ರಕಾಶ್ ಮೃದಂಗ , ಹರೀಶ್ ಕಂಜರ ಸಹಕಾರ ನೀಡಿದರು . ಗಾಯತ್ರಿ ಸಂಗೀತ ಕಲಾ ನಿಕೇತನದ ವಿವಿಧ ಸಂಗೀತ ಕಲಿಕಾರ್ಥಿಗಳು ಗಾಯನ ಪ್ರದರ್ಶನ ನೀಡಿದರು . ವೀಣಾ , ಪ್ರಗತಿ ಮತ್ತು ಸಾಯಿ ತಂಡದಿಂದ ಪ್ರಾರ್ಥನೆ ನೆರವೇರಿತು .
