ಕುಂದಾಪುರ : ಗೆಳೆಯರ ಸ್ವಾವಲಂಬನ (ರಿ.) ಕುಂದಾಪುರ-ಮುಂಬೈ ಇವರ ಆಶ್ರಯದಲ್ಲಿ ಕುಂದಾಪುರದ ರಾಮ ಮಂದಿರ ಮಾರ್ಗದಲ್ಲಿ ವಿಜಯ ಟೆಕ್ಸ್ಟೈಲ್ಸ್ ಎದುರಿನ ಕಚೇರಿಯಲ್ಲಿ ಉಚಿತ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆಯು ಮಾರ್ಚ್ 25 ರಂದು ಜರುಗಿತು. ಉದ್ಘಾಟಕರಾಗಿ ಆಗಮಿಸಿದ ಪ್ರಸಿದ್ಧ ವಸ್ತ್ರ (ಡ್ರೆಸ್) ವಿನ್ಯಾಸಕಿ ಶ್ರೀಮತಿ ಪ್ರಮೀಳಾ ಅವರು ಕುಂದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಹಿಳೆಯರು ಇದರ ಸದುಪಯೋಗ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಹೊಲಿಗೆ ಶಿಬಿರಕ್ಕೆ ಶುಭ ಹಾರೈಸಿದರು.
ಕೇಂದ್ರದ ಅಧ್ಯಕ್ಷರಾದ ವೆಂಕಟೇಶ ಪೈ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಗೆಳೆಯರ ಸ್ವಾವಲಂಬನವು ಕಳೆದ 12 ವರ್ಷಗಳಿಂದ ಕುಂದಾಪುರ-ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಟ್ಟೆ ಚೀಲ ಹೊಲಿಯುವುದರೊಂದಿಗೆ “ಪ್ಲಾಸ್ಟಿಕ್ ತ್ಯಜಿಸಿ, ಬಟ್ಟೆ ಚೀಲ ಬಳಸಿ, ಪರಿಸರ ರಕ್ಷಿಸಿ” ಎಂಬ ತತ್ವದೊಂದಿಗೆ ಸಮಾಜ ಸೇವೆಗೈಯುತ್ತಿದೆ. 200ಕ್ಕೂ ಮಿಕ್ಕಿ ಪುರುಷ, ಮಹಿಳೆಯರು ಕೇಂದ್ರದಲ್ಲಿ ಚೀಲ ಹೊಲಿಯುತ್ತಿದ್ದಾರೆ.
ಈಗ ಕುಂದಾಪುರದಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಾಥಮಿಕ ಹೊಲಿಗೆ, ಇಲೆಕ್ಟ್ರಿಕ್ ಮೋಟರ್ ಅಳವಡಿಸಿ ಹೊಲಿಗೆ, ಆಲ್ಟ್ರೇಷನ್, ಫಿಟ್ಟಿಂಗ್, ಬಟ್ಟೆ ಚೀಲಗಳ ಹೊಲಿಗೆ, ಹೊಲಿಗೆ ಯಂತ್ರದ ಸಣ್ಣ ಪುಟ್ಟ ರಿಪೇರಿ ಇತ್ಯಾದಿಗಳನ್ನು ಕಲಿಸಲಾಗುವುದು. ಸಮಯ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರ ತನಕ, ವಯೋಮಿತಿ ಇಲ್ಲ ಎಂದರು.
ಹೊಲಿಗೆ ಶಿಬಿರದ ಶಿಕ್ಷಕಿ ಶ್ರೀಮತಿ ನಾಗಮಣಿ ಅವರು ಎಲ್ಲರಿಗೂ ವಂದಿಸಿದರು.