ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ನಾವು ಆಧುನಿಕ ಸಿದ್ಧ ಪಡಿಸಿದ ಬೀಜ ಸಂಸ್ಕೃತಿ ಹಾಗೂ ರಸಾಯನಿಕ ಔಷಧಿಗಳನ್ನು ಅವಲಂಭಿತ ಕೃಷಿ ಪದ್ಧತಿಯನ್ನು ಅನುಸರಿಸುತ್ತಾ , ನಮ್ಮ ಪಾರಂಪರಿಕ ಕೃಷಿ ಪದ್ಧತಿಗಳನ್ನು ಮರೆಯುತ್ತಿದ್ದೇವೆ . ನಮ್ಮ ನೆಲದ ಪಾರಂಪರಿಕ ಕೃಷಿ ಪದ್ಧತಿಯ ಬಗೆಗಿನ ಸ್ಥಳೀಯ ಸಾಂಪ್ರದಾಯಿಕ ಜ್ಞಾನಾಧ್ಯಯನ ನಡೆಸಿ ದಾಖಲು ಮಾಡುವ ಅಗತ್ಯವಿದೆ . ಹಾಗಾಗಿ ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕೆಂದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ . ಸಲ್ವಮಣಿ ಕರೆ ನೀಡಿದರು . ಇಲ್ಲಿನ ಕುವೆಂಪು ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಬುಡ್ಡಿದೀಪಾ ಪಾಠಶಾಲೆಯ ” ರೈತ ಸಂಸ್ಕೃತಿ ಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು . ನಮ್ಮ ಪೂರ್ವಜರು ಸಹಸ್ರಾರು ವರ್ಷಗಳಿಂದ ನ ಸ್ಥಳೀಯ ಸಾಂಪ್ರದಾಯಿಕ ಜ್ಞಾನವನ್ನು ಆಧರಿಸಿದ ಕೃಷಿಯನ್ನು ಮಾಡುತ್ತಿದ್ದರು . ರೈತ ತಾನು ಬೆಳೆಯುವ ಪ್ರತಿಯೊಂದ ಬೆಳೆಗೂ ಅವನದ್ದೇ ಆದ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದ . ಇದು ಬೆಳೆಯನ್ನು ನಾಶವಾಗದಂತೆ ಕಾಯುತ್ತಿತ್ತು . ಅದೇ ರೀತಿ ನಮ್ಮ ರೈತರು ಬೆಳೆಯುವ ಬೆಳೆಯಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಎಲ್ಲಾ ರೀತಿಯ ಅರಿವಿದ್ದರೂ ಅದನ್ನು ದಾಖಲೀಕರಿಸದೆ ಹೋದ ಕಾರಣ ಇಂದು ನಮ್ಮ ನೆಲದಲ್ಲೇ ಬೆಳೆಯುತ್ತಿರುವ ಹರಿಶಿನ , ವಿವಿಧ ತಳಿಯ ಭತ್ತ ಸೇರಿದಂತೆ ಬಹಳಷ್ಟು ಬೆಳೆಗಳ ಉಪಯೋಗವನ್ನು ವಿದೇಶಿಗರು ಅಧ್ಯಯನ ನಡೆಸಿ ದಾಖಲು ಮಾಡುವ ಮೂಲಕ ಅದರ ಆರ್ಥಿಕ ಹಕ್ಕುದಾರಿಕೆಯಾದ ಪೇಟೆಂಟ್ ಪಡೆಯುತ್ತಿದ್ದಾರೆ . ಇದು ಇಂದಿಗೂ ನಮ್ಮ ನೆಲದ ಮೇಲೆ ವಿದೇಶಿಗರು ಪ್ರಯಗ ನಡೆಸುತ್ತಿದ್ದಾರೆ . ಇನ್ನಾದರೂ ನಮ್ಮ ರೈತರು ಸ್ಥಳೀಯ ಕೃಷಿ ಜ್ಞಾನವನ್ನು ದಾಖಲಿಸುವ ಮೂಲಕ ಪೇಟೆಂಟ್ ಪಡೆಯುವುದು ಹಾಗೂ ಅದರ ಆರ್ಥಿಕ ಲಾಭ ಹೊಂದಲು ಸಿದ್ಧರಾಗಿ ಎಂದು ಕಿವಿಮಾತಾಡಿದರು .
ಇನ್ನೂ ರೈತರು ಎಲ್ಲಾ ಸಿದ್ಧಪಡಿಸಿದ ಗೊಬ್ಬರ , ಬೀಜಗಳನ್ನೇ ಅವಲಂಬಿಸಿದ್ದಾರೆ , ಇದರಿಂದ ಹೊರಬಂದು ಆಧುನಿಕತೆಯ ಜೊತೆಗೆ ನಮ್ಮ ಪಾರಂಪರಿಕ ಕೃಷಿ ಜ್ಞಾನಭಂಡಾರವನ್ನು ವೃದ್ಧಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ . ಈ ನಿಟ್ಟಿನಲ್ಲಿ ರೈತ ಚಳುವಳಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕೋಲಾರದಲ್ಲಿ ಆರಂಭಿಸಿರುವ ರೈತ ಸಂಸ್ಕೃತಿ ಅಧ್ಯಯನ ಕೇಂದ್ರ ರಾಜ್ಯ ಮತ್ತು ರಾಷ್ಟ್ರಕ್ಕೆ ಒಂದು ಮಾದರಿಯಾಗಲಿ . ಉದಯೋನ್ಮುಖ ಕೃಷಿ ಅಧ್ಯಯನಕಾರರು , ವಿದ್ಯಾರ್ಥಿಗಳು , ರೈತರು ಇದರ ಸದುಪಯೋಗ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿ ಹಾಡಲಿ ಎಂದು ಹಾರೈಸಿದರು . ರೈತ ಸಂಘದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಿಣಿ ಶಿವಪ್ಪ ಮಾತನಾಡಿ , ನಮ್ಮ ಹಿಂದಿನ ಕೃಷಿ ಪದ್ಧತಿಯನ್ನು ದಾಖಲೀಕರಣ ಮಾಡಲು , ರೈತರ ಸಮಸ್ಯೆಗಳನ್ನು ತಿಳಿಸುವ ಕಲಾ ಮಾದ್ಯಮ , ಆಧುನಿಕ ಕೃಷಿ ಪದ್ಧತಿಯ ಅಧ್ಯಯನ ಮಾಡಲು ಕೃಷಿ ಸಂಸ್ಕೃತಿ ಕೇಂದ್ರದ ಅಗತ್ಯವಿದ್ದ ಕಾರಣ ಇಂದು ಆರಂಭಿಸಲಾಗಿದೆ . ರೈತರು ಇದರ ಸದುಪಯೋಗ ಪಡೆದುಕೊಂಡು , ಕೃಷಿಯಲ್ಲಿ ಯಶಸ್ಸು ಸಾಧಿಸಬೇಕು , ಆ ಮೂಲಕ ಈ ಕೃಷಿ ಸಂಸ್ಕೃತಿ ಕೇಂದ್ರ ಒಂದು ಮಾದರಿ ಕೇಂದ್ರವಾಗಿಸಬೇಕೆಂದರು . ಚಾರಣ ಸಾಹಿತಿ ಪ್ರವರ್ತಕರಾದ ಡಾ.ಚಂದ್ರಶೇಖರ್ ನಂಗಲಿಯವರಿಂದ ವಿಶೇಷ ಉಪನ್ಯಾಸ ನೀಡಲಾಯಿತು . ರಂಗಕರ್ಮಿ ಸಿ . ಬಸವಲಿಂಗಯ್ಯ ಮಾತನಾಡಿದರು . ಇದಕ್ಕೂ ಮುನ್ನ ಕೋಟಿಗಾನಹಳ್ಳಿ ರಾಮಯ್ಯ ರಚಿಸಿದ ಮೈಸೂರು ಸಿ.ಬಸವಲಿಂಗಯ್ಯ ನಿರ್ದೇಶನದ ಗಂಗಮ್ಮ ನೀರಿನಾಗ ಜಡೆ ಹೆಣೀತಾ ಅವೇ … ಬೀದಿನಾಟಕವನ್ನು ಪ್ರಸ್ತುತಪಡಿಸಲಾಯಿತು . ಬುಡ್ಡಿದೀಪ ಕಲಾಬಳಗದಿಂದ ತಮಟೆ ವಾದನವನ್ನು ನುಡಿಸಲಾಯಿತು .
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ , ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ , ರಂಗಕರ್ಮಿ ಸಿ.ಬಸವಲಿಂಗಯ್ಯ , ನರಸಿಂಹಯ್ಯ , ಜಿಲ್ಲಾಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ , ವಕೀಲ ಸತೀಶ್‌ಗೌಡ , ತಾಲ್ಲೂಕು ಅಧ್ಯಕ್ಷ ಕೆ.ಆನಂದ್‌ಕುಮಾರ್ , ತಿಪ್ಪಸಂದ್ರ ಹರೀಶ್ , ತಿಮ್ಮಾರೆಡ್ಡಿ , ಬಂಗವಾದಿ ನಾಗರಾಜಗೌಡ , ಹೊಳಲಿ ಹೊಸೂರು ಚಂದ್ರಪ್ಪ , ವೀರಾಪುರ ಮಂಜು ಮೊದಲಾದವರಿದ್ದರು .