ಕುಂದಾಪುರ, ಜು,27: ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೇಳೂರಿನ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರು, ಪರಿಸರ ಪ್ರೇಮಿ, ಬರಹಗಾರರು, ಹಲವು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಗೌರವಾನ್ವಿತ ಉದಯ ಗಾಂವಕರ್ ರವರು ದಿನಾಂಕ 27 ಜುಲೈ ಶನಿವಾರದಂದು ಗಿಡ ನೆಡುವುದರೊಂದಿಗೆ ಹಾಗೂ ಗಿಡಕ್ಕೆ ನೀರನ್ನು ಎರೆಯುವುದರೊಂದಿಗೆ ಸಾಂಕೇತಿಕ ಪರಿಸರ ಹಾಗೂ ವಿಜ್ಞಾನ ಸಂಘಗಳ ಉದ್ಘಾಟನೆ ಮಾಡಿದರು.
ಅವರು ಸಭೆಯನ್ನು ಉದ್ದೇಶಿಸಿ ನಮಗೆ ಪರಿಸರದ ಬಗ್ಗೆ ಕಾಳಜಿ ಅಂತರ್ಗತ. ನಾವೆಲ್ಲ ನಮ್ಮ ಕೈಲಾದಷ್ಟು ಪರಿಸರದ ಮೇಲೆ ಆಗುವ ಅನಾಹುತಗಳನ್ನು ತಿರುವು ಮುರುವು ಗೊಳಿಸಲಿಕ್ಕೆ ಪ್ರಯತ್ನಿಸಬೇಕು. ನಾವು ನಮ್ಮಿಂದ ಪರಿಸರದ ಮೇಲಾಗುವ ಸಣ್ಣ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎನ್ನುತ್ತಾ ಪರಿಸರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಫೇರ್ನಾಂಡಿಸ್ ರವರು ಉಪಸ್ಥಿತರಿದ್ದು, ಪರಿಸರದ ಕುರಿತು ಅನೇಕ ಮಾತುಗಳನ್ನು ತಿಳಿಸಿ ಶುಭ ಹಾರೈಸಿದರು. ವಿಜ್ಞಾನ ಹಾಗೂ ಪರಿಸರ ಸಂಘಗಳ ವಿದ್ಯಾರ್ಥಿ ಪ್ರತಿನಿಧಿಗಳಾದ ಹರ್ಷಿತ್ ಹಾಗೂ ಜುವೆಲ್ ಮೆಂಡೋನ್ಸಾ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಉಪನ್ಯಾಸಕ ನಾಗರಾಜ ಶೆಟ್ಟಿ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕಿ ಹಾಗೂ ಗಣಿತ ಉಪನ್ಯಾಸಕಿ ಮಲ್ಲಿಕಾರವರ ಧನ್ಯವಾದದೊಂದಿಗೆ, ಆಂಗ್ಲ ಉಪನ್ಯಾಸಕಿ ಶಿಲ್ಪಶ್ರೀ ಯವರು ಕಾರ್ಯಕ್ರಮ ನಿರೂಪಿಸಿದರು.