ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಐಎನ್ಎ ರಾಮರಾವ್ ಸುಭಾಷ್ ಚಂದ್ರಬೋಸ್ರ ಶಿಷ್ಯರಾಗಿ ಅಪ್ರತಿಮ ದೇಶಪ್ರೇಮಿ ಹಾಗೂ ಸೇವಾದಳದ ನಿಷ್ಠಾವಂತ ಕಾರ್ಯಕರ್ತರಾಗಿದ್ದರೆಂದು ಭಾರತ ರೆಡ್ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ವಿ.ಪಿ.ಸೋಮಶೇಖರ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಐಎನ್ಎ ರಾಮರಾವ್ರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಿಸ್ತಿಮ ಪ್ರತಿರೂಪವಾಗಿದ್ದ ರಾಮರಾವ್ ಹದಿನೇಳು ವರ್ಷಗಳ ಹಿಂದೆ ಕೋಲಾರ ನಗರಕ್ಕೆ ಆಗಮಿಸಿ ಸೇವಾದಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಚೆನ್ನೈನಲ್ಲಿ ಸುನಾಮಿಯಾಗಿದ್ದ ಸಂದರ್ಭದಲ್ಲಿ ಸೇವಾದಳ ಸ್ವಯಂ ಸೇವಾ ಕಾರ್ಯಕರ್ತರ ತಂಡಕ್ಕೆ ತರಬೇತುದಾರರಾಗಿದ್ದರೆಂದು ಸ್ಮರಿಸಿಕೊಂಡರು.
ಬೆಂಗಳೂರಿನ ಸ್ವಾತಂತ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಧ್ವಜಾರೋಹಣಕ್ಕೆ 30 ಸೆಕೆಂಡ್ ತಡವಾಗಿ ಆಗಮಿಸಿದರೆಂಬ ಕಾರಣಕ್ಕೆ ತಾವೇ ಧ್ವಜಾರೋಹಣ ನೆರವೇರಿಸಿ ಮುಖ್ಯಮಂತ್ರಿಗೆ ಶಿಸ್ತು ಮತ್ತು ಸಮಯ ಪರಿಪಾಲನೆಯ ಪಾಠ ಮಾಡಿದ್ದರೆಂದು ಹೇಳಿದರು.
ಭಾರತ ಸೇವಾದಳ ಮಾಲೂರು ತಾಲೂಕು ಅಧ್ಯಕ್ಷ ಬಹಾದ್ದೂರ್ಸಾಬ್ ಮಾತನಾಡಿ, ದೇಶಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಎಎನ್ಎ ರಾಮರಾವ್ರ ದೇಶಪ್ರೇಮ ಅನುಕರಣೀಯವಾಗಿದೆಯೆಂದರು.
ಭಾರತ ಸೇವಾದಳ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಸಮಯ ಪರಿಪಾಲನೆ ಮತ್ತು ಶಿಸ್ತಿನ ಪ್ರತಿರೂಪವಾಗಿದ್ದ ರಾಮರಾವ್ ತಮ್ಮ ಕೊನೆಯ ದಿನಗಳನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯದೆ ಭಾರತಸೇವಾದಳದ ಕಚೇರಿಯಲ್ಲಿಯೇ ಕಳೆದು ಜೀವನ ತ್ಯಾಗಮಾಡಿದರೆಂದು ವಿವರಿಸಿದರು.
ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸುಭಾಷ್ ಚಂದ್ರಬೋಸ್ರ ಪ್ರೀತಿಯ ಶಿಷ್ಯರಾಗಿ ಅವರೇ ಸ್ಥಾಪಿಸಿದ್ದ ಐಎನ್ಎ ಆರ್ಮಿಯ ಭಾಗವಾಗಿ ಯುದ್ಧಗಳಲ್ಲಿ ಪಾಲ್ಗೊಂಡು ಗುಂಡೇಟು ತಿಂದಿದ್ದ ರಾಮರಾವ್ ಮುನ್ನಡೆಸಿದ ಭಾರತ ಸೇವಾದಳದ ಭಾಗವಾಗಿ ನಾವೆಲ್ಲರೂ ಇರುವುದೇ ಧನ್ಯತಾ ಭಾವ ಎಂದರು.
ಇದೇ ಸಂದರ್ಭದಲ್ಲಿ ಐಎನ್ಎ ರಾಮರಾವ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಮುಖಂಡರಾದ ಬೈರೇಗೌಡ, ರಾಜೇಶ್ಸಿಂಗ್, ಆರ್.ಶ್ರೀನಿವಾಸನ್, ಶಿಕ್ಷಕ ನಾರಾಯಣಸ್ವಾಮಿ ತಾಲೂಕು ಭಾರತ ಸೇವಾದಳ ಅಧ್ಯಕ್ಷ ವೈ.ಶಿವಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಇತರರು ಹಾಜರಿದ್ದರು.
ಸೇವಾದಳದ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ನಿರ್ವಹಿಸಿದ ಕಾರ್ಯಕ್ರಮ ನಿಯಮಗಳಂತೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು.