ಭವಿಷ್ಯದ ದೃಷ್ಟಿಯಿಂದ ಎಲ್‍ಐಸಿ ಪ್ರತಿನಿಧಿಗಳು ಜೀವ ವಿಮೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು;ಎಂ.ಕೃಷ್ಣವೇಣಿ

ಶ್ರೀನಿವಾಸಪುರ: ಭವಿಷ್ಯದ ದೃಷ್ಟಿಯಿಂದ ಎಲ್‍ಐಸಿ ಪ್ರತಿನಿಧಿಗಳು ಜೀವ ವಿಮೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಪಾಲಸಿದಾರರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಅವರ ವಿಶ್ವಾಸ ಗಳಿಸಬೇಕು ಎಂದು ಭಾರತೀಯ ಜೀವ ವಿಮಾ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕಿ ಎಂ.ಕೃಷ್ಣವೇಣಿ ಹೇಳಿದರು.
ಪಟ್ಟಣದ ಎಲ್‍ಐಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಎಲ್‍ಐಸಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್‍ಐಸಿ ದೇಶದ ದೊಡ್ಡ ಆರ್ಥಿಕ ಸಂಸ್ಥೆಯಾಗಿದ್ದು, ಸಮಾಜ ಸೇವೆ ಹಾಗೂ ಆರ್ಥಿಕ ಪ್ರಗತಿಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಎಲ್‍ಐಸಿ ಪ್ರಚಾರ ಮಾಡಬೇಕು. ಮುಖ್ಯವಾಗಿ ಮಹಿಳೆಯರಿಗೆ ಅರಿವು ಮೂಡಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ. ಮಹಿಳಾ ಪಾಲಿಸಿದಾರರ ಸಂಖ್ಯೆ ಹೆಚ್ಚಿಸಬೇಕು. ದುರ್ಘಟನೆಗಳು ಹೇಳಿ ಕೇಳಿ ಬರುವುದಿಲ್ಲ. ಅಂಥ ಸಂದರ್ಭದಲ್ಲಿ ಎಲ್‍ಐಸಿ ಪಾಲಿಸಿದಾರರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಎಲ್‍ಐಸಿ ಘಟಕದ ವ್ಯವಸ್ಥಾಪಕ ಸಿದ್ದೇಶ್ ಮಾತನಾಡಿ, ಪ್ರತಿನಿಧಿಗಳು ನಿರ್ವಹಿಸುವ ಕಾರ್ಯದ ಮೇಲೆ ಸಂಸ್ಥೆ ಭವಿಷ್ಯ ಹಾಗೂ ಜನರ ಭವಿಷ್ಯ ನಿಂತಿದೆ. ಹಾಗಾಗಿ ಇದೊಂದು ಸಮಾಜ ಸೇವಾ ಕಾರ್ಯವೆಂದು ಪರಿಗಣಿಸಿ ಹೆಚ್ಚು ಪಾಲಸಿ ಮಾಡಿಸಬೇಕು. ಜನರಲ್ಲಿ ಎಲ್‍ಐಸಿ ಕುರಿತು ತಿಳುವಳಿಕೆ ಉಂಟುಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್, ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ, ಶ್ರೀನಿವಾಸ್, ಯೋಜನಾ ವ್ಯವಸ್ಥಾಪಕ ಆರ್.ಗುರುಕೃಷ್ಣ ಇದ್ದರು.