ಕೋಲಾರ:- ಹಿಂದಿ ಕಲಿಕೆಯಿಂದ ರಾಜ್ಯದ ವಿದ್ಯಾರ್ಥಿಗಳನ್ನು ವಂಚಿಸುವುದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯವಾಗಲಿದೆ ಈ ಹಿನ್ನಲೆಯಲ್ಲಿ ತೃತೀಯ ಭಾಷೆ ಜತೆಜತೆಗೆ ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೂ ಎನ್ಎಸ್ಕ್ಯೂಎಫ್ ಅಡಿ ವೃತ್ತಿಕೌಶಲ ಯೋಜನೆ ಅನುಷ್ಟಾನಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಶಾಲಾ ಶಿಕ್ಷಣ ಉಪನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಜಿಲ್ಲೆಯ ವಿವಿಧ ಶಿಕ್ಷಕ ಸಂಘಟನೆಗಳ ನೇತೃತ್ವದಲ್ಲಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ವಿ.ವಿ.ರಾಮಕೃಷ್ಣಪ್ಪ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಯ್ದ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿಯ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯ ಬದಲಾಗಿ ವೃತ್ತಿ ಶಿಕ್ಷಣ ಕೌಶಲ ಯೋಜನೆಯನ್ನು ಅನುಷ್ಠಾನಗೊಳ್ಳುತ್ತಿರುವುದರಿಂದ ತೃತೀಯ ಭಾಷೆಯ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ತಿಳಿಸಿದರು.
ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳ ಅವಕಾಶ ಮರೀಚಿಕೆಯಾಗಲಿದ್ದು, ಈ ಎನ್ಎಸ್ಕ್ಯೂಎಫ್ ವೃತ್ತಿ ಶಿಕ್ಷಣ ಕೌಶಲ ಯೋಜನೆಯನ್ನು ಕೇವಲ ತೃತೀಯ ಭಾಷೆಯ ಬದಲಾಗಿ ಏಕೆ ಅನುಷ್ಠಾನಗೊಳಿಸಬೇಕು ಎಂದು ಪ್ರಶ್ನಿಸಿದ ಅವರು, ವೃತ್ತಿಕೌಶಲ ವಿಷಯವನ್ನು ಹಿಂದಿ ಜತೆಗೆ ಎಲ್ಲಾ ಮಕ್ಕಳಿಗೂ ಕಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಡೀ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ತ್ರಿಭಾಷಾ ಸೂತ್ರದಡಿಯಲ್ಲಿ ಮೂರು ಭಾಷೆ ಕಲಿಯಲು ಅವಕಾಶವಿರುವುದರಿಂದ ಮಕ್ಕಳು ಕನ್ನಡ,ಇಂಗ್ಲೀಷ್ ಜತೆಗೆ ಹಿಂದಿಯನ್ನು ಕಲಿತು ಪ್ರೌಢಿಮೆ ಬೆಳೆಸಿಕೊಳ್ಳುತ್ತಾರೆ ಇದರಿಂದಾಗಿ ರೈಲ್ವೆ, ಬ್ಯಾಂಕಿಂಗ್, ಅಂಚೆ ಇಲಾಖೆ ಮತ್ತಿತರ ಕೇಂದ್ರಸರ್ಕಾರದ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಆದರೆ ರಾಜ್ಯ ಸರ್ಕಾರ ತೃತೀಯ ಭಾಷೆ ಹಿಂದಿ ಬದಲಿಗೆ ವೃತ್ತಿಶಿಕ್ಷಣ ಕೌಶಲ ಯೋಜನೆ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಂಡರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತೃತೀಯ ಭಾಷೆಯ ಕಲಿಕೆಯಿಂದ ವಂಚಿತರಾಗುತ್ತಾರೆ, ಇದು ಮಕ್ಕಳಿಗೆ ಮಾಡಿದ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ನೆರೆಯ ಆಂಧ್ರ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ತ್ರಿಭಾಷ ಸೂತ್ರದಡಿಯಲ್ಲಿ ಮೂರು ಭಾಷೆಗಳನ್ನು ಕಲಿಯಲು ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಹಿಂದಿ ಭಾಷೆ ಕಲಿಕೆಯಿಂದ ಮಕ್ಕಳನ್ನು ದೂರ ಮಾಡಿ ಕೇವಲ ವೃತ್ತಿ ಶಿಕ್ಷಣ ಕೌಶಲ ತರಬೇತಿ ಅನುಷ್ಠಾನಗೊಳಿಸಿದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳು ಮಾತ್ರವಲ್ಲ, ಭಾರತೀಯ ಸೇನೆ ನೇಮಕಾತಿ, ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತೀರ್ಣರಾಗುವಲ್ಲಿಯೂ ಹಿನ್ನಡೆಯಲಿದೆ ಎಂದರು.
ಸರ್ಕಾರಕ್ಕೆ ನಮ್ಮ ಮಕ್ಕಳಿಗೆ ವೃತ್ತಿ ಶಿಕ್ಷಣ ಕೌಶಲ ನೀಡುವ ಸದುದ್ದೇಶವಿದ್ದರೆ ಎಲ್ಲಾ ಮಕ್ಕಳಿಗೂ ಈ ಅವಕಾಶ ಕಲ್ಪಿಸಲಿ, ತ್ರಿಭಾಷಾ ಸೂತ್ರದನ್ವಯ ಹಿಂದಿ ಕಲಿಕೆಗೂ ಅವಕಾಶ ನೀಡಿ ಅದರ ಜತೆಗೆ 8,9ಮತ್ತು 10ನೇ ತರಗತಿಯ ಎಲ್ಲಾ ಮಕ್ಕಳಿಗೂ ವೃತ್ತಿಶಿಕ್ಷಣ ಕೌಶಲ ಕಲಿಸುವ ಕಾರ್ಯ ಮಾಡಲಿ ಎಂದು ಮನವಿ ಮಾಡಿದರು.
ಕೆಲವು ಮಕ್ಕಳಿಗೆ ತೃತೀಯ ಭಾಷೆ ಹಿಂದಿ ಮತ್ತೆ ಕೆಲವು ಮಕ್ಕಳಿಗೆ ಎನ್ಎಸ್ಕ್ಯೂಎಫ್ ವೃತ್ತಿ ಶಿಕ್ಷಣ ಕೌಶಲ ತರಬೇತಿ ನೀಡುವುದರಿಂದ ಮಕ್ಕಳಲ್ಲಿ ತಾರತಮ್ಯವುಂಟು ಮಾಡಿ ವಂಚಿಸಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಜಿಲ್ಲೆಯ ಗ್ರಾಮೀಣ ಬಡ ವಿದ್ಯಾರ್ಥಿಗಳ ಪರವಾಗಿ ನಮ್ಮ ಕಳಕಳಿಯ ಮನವಿ ಏನೆಂದರೆ ಸರ್ಕಾರ ಈ ಹಿಂದೆ ತ್ರಿಭಾಷಾ ಸೂತ್ರ ಜಾರಿಗೊಳಿಸಿರುವಂತೆ ಮುಂದುವರೆಸಿ, ಪ್ರೌಢಶಾಲೆಗಳ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಯಾವುದೇ ತಾರತಮ್ಯವಿಲ್ಲದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ತೃತೀಯ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವಂತಾಗಬೇಕು. ಈ ವಿಷಯಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ತೃತೀಯ ಭಾಷೆಯ ಅನಿವಾರ್ಯತೆಯನ್ನು ವಿವರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಲು ತಮ್ಮಲ್ಲಿ ಕೋರುತ್ತೇವೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿಯೂ ಸಾಧಕಬಾಧಕಗಳ ಕುರಿತು ವರದಿ ನೀಡುವುದಾಗಿಯೂ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿ.ವಿ.ರಾಮಕೃಷ್ಣಪ್ಪ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ.ಎಸ್, ಕೋಲಾರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಕೋಲಾರ ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ರಾಮಾಂಜನೇಯ, ಖಜಾಂಚಿ ವೇಣುಗೋಪಾಲ,ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಶಿಕ್ಷಕರಾದ ಮಂಜುನಾಥ್, ವೆಂಕಟರಮಣಪ್ಪ, ಲಲಿತಕಲಾ, ಪ್ರಭಾ, ಚಂದ್ರಶೇಖರ್, ಶ್ರೀನಾಥ್, ಶ್ರೀನಾಥ್ ಬಂಗಾರಪೇಟಿ, ರಘುಕುಮಾರ್ ಹಾಗೂ ಹಿಂದಿ ಶಿಕ್ಷಕರು ಹಾಜರಿದ್ದರು.