

ಕುಂದಾಪುರ (ಫೆ.೧೩): ಇಂದಿನ ಸಮಾಜದಲ್ಲಿ ಹಣಕ್ಕೆ ಕೊರತೆಯಿಲ್ಲ, ಅಂತಃಕರಣಕದ ಕೊರತೆ ಇದೆ. ಶಿಕ್ಷಕರಾದವರು ಮುಖ್ಯವಾಗಿ ಮಕ್ಕಳ ನಂಬಿಕೆಯನ್ನುಳಿಸಿಕೊಂಡು ಅವರನ್ನು ಅರ್ಥೈಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಆರೈಕೆ, ಕಾಳಜಿ ಮತ್ತು ಸ್ಥಿರತೆ ಈ ಅಂಶಗಳನ್ನು ಶಿಕ್ಷಕರು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ಜಿ.ಎಸ್ ಶಿವರುದ್ರಪ್ಪನವರ ಮಗ, ಚಾಮರಾಜನಗರದ ದೀನಬಂಧು ಟ್ರಸ್ಟ್ ನ ಸ್ಥಾಪಕರು, ಶಿಕ್ಷಣ ಚಿಂತಕರು, ಕವಿ, ಬರೆಹಗಾರರೂ ಆಗಿರುವ ಪ್ರೋ.ಜಯದೇವ ಜಿ.ಎಸ್ ರವರು ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ ಶಿಕ್ಷಕ ಪುನಶ್ಚೇತನ ಕಾರ್ಯಾಗಾರದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ವಿವೇಕಾನಂದ ಶೈಕ್ಷಣಿಕ ಅನುಸಂಧಾನದ ನಿರ್ದೇಶಕರಾದ ಡಾ. ಎಚ್. ಎನ್ ಮುರಳೀಧರ್ ರವರು “ ಶಿಕ್ಷಣ ಮತ್ತು ಮೌಲ್ಯ” ಎಂಬ ವಿಚಾರವಾಗಿ ಮಾತನಾಡುತ್ತಾ, ಕಲಿಯುವ ಬಿಂದು ಜ್ಞಾನದ ಸಿಂಧು. ಕಲಿಯುವಿಕೆ ಎನ್ನುವುದು ಹೊರಗಿನ ವಿಚಾರಗಳನ್ನು ತಿಳಿಯುವುದಲ್ಲ, ನನ್ನೊಳಗಿನ ಅರಿವನ್ನು ವಿಸ್ತಾರಗೊಳಿಸುವುದು. ನಾನು ಈ ವಿಶ್ವದಲ್ಲಿ ಬದುಕುತ್ತಿಲ್ಲ ಇಡೀ ವಿಶ್ವವೇ ನನ್ನೊಂದಿಗೆ ಬದುಕುತ್ತಿದೆ ಎಂಬ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂಪನ್ಮೂಲ ವ್ಯಕ್ತಿಗಳ ಸಾಧನೆಗಳನ್ನು ಗುರುತಿಸಿ, ಸಂಸ್ಥೆಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿಯರಾದ ಸ್ವಪ್ನ ಸತೀಶ್ ಮತ್ತು ದಿವ್ಯ ಎಚ್ ಕಾರ್ಯಕ್ರಮ ನಿರೂಪಿಸಿದರು.


