

ಕೋಲಾರ;- ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯುಗಾದಿಗೆ ಬಡವರ ಮನೆಯಲ್ಲಿ ಯುಗಾದಿ ಹಬ್ಬದಂದು ಹಸಿವು ನೀಗಿಸಿ ಸಂಭ್ರಮಕ್ಕೆ ಕಾರಣವಾಗಬೇಕಾಗಿದ್ದ ಲಕ್ಷಾಂತರ ಮೌಲ್ಯದ ಅಕ್ಕಿ, ಬೇಳೆ, ಬೆಲ್ಲ ಮಳೆಯಿಂದಾಗಿ ನೀರುಪಾಲದ ಘಟನೆ ಗುರುವಾರ ನಡೆದಿದೆ.
ಕಳೆದ ಮಾ.9 ರಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಧಾಳಿ ಹಡೆಸಿ ಅಕ್ರಮ ದಾಸ್ತಾನು ಹಾಗೂ ಚುನಾವಣೆ ಹಿನ್ನೆಲೆ ವಶಕ್ಕೆ ಪಡೆದಿದ್ದ ಆಹಾರ ಧಾನ್ಯಗಳು ಇಂದು ದಿಢೀರನೆ ಸುರಿದ ಭಾರಿ ಆಲಿಕಲ್ಲು ಮಳೆಗೆ ನೀರುಪಾಲಾಗಿದ್ದು, ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಕೋಲಾರ,ಚಿಕ್ಕಬಳ್ಳಾಫುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆಗ್ರಹಿಸಿದ್ದಾರೆ.
ಇತ್ತೀಚೆಗೆ ತಾಲ್ಲೂಕಿನ ಬ್ಯಾಲಹಳ್ಳಿಯ ಶ್ರೀನಾಥ್ ಎಂಬುವವರ ಶೆಡ್ನಲ್ಲಿ ಜನತೆಗೆ ಯುಗಾದಿ ಹಬ್ಬಕ್ಕೆಂದು ಹಂಚಲು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಪುಡ್ಕಿಟ್ ಸಿದ್ದಪಡಿಸಲು ಮುಂದಾಗಿದ್ದರು. ಇದನ್ನು ಸಹಿಸದ ಅಧಿಕಾರಿಗಳು ಧಾಳಿ ನಡೆಸಿ ಆಹಾರಧಾನ್ಯ,ದಿನಸಿಯನ್ನು ವಶಪಡಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಬಡ ಜನರ ಊಟವಾಗಬೇಕಾಗಿದ್ದ ಈ ಆಹಾರ ಧಾನ್ಯಗಳನ್ನು ಮಳೆ,ಬಿಸಿಲಿಂದ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಮೊದಲೇ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಇಂದು ಬಿದ್ದ ಮಳೆಗೆ ಲಕ್ಷಾಂತರ ಮೌಲ್ಯದ ಈ ಆಹಾರಧಾನ್ಯಗಳು ನೀರುಪಾಲಾಗಿದೆ ಎಂದು ಗೋವಿಂದಗೌಡ ದೂರಿದರು.
ಕೋಲಾರ ತಾಲ್ಲೂಕು ಬ್ಯಾಲಹಳ್ಳಿ ಗ್ರಾಮದಲ್ಲಿ ದಾಳಿ ಮಾಡಿ ವಶ ಪಡಿಸಿಕೊಂಡಿದ್ದ ಆಹಾರ ಧಾನ್ಯಗಳು,ಕೆಜಿಎಫ್ ಶಾಸಕಿ ರೂಪಕಲಾ ಅವರಿಗೆ ಸೇರಿದ್ದು, ಕೆಜಿಎಫ್ ಕ್ಷೇತ್ರದಲ್ಲಿನ ಬಡ ಜನತೆಗೆ ಯುಗಾದಿ ಆಚರಣೆಗೆ ವಿತರಿಸಲು ಕ್ರಮವಹಿಸಲಾಗಿತ್ತು. ಆದರೆ ಸುಳ್ಳು ಆರೋಪದಡಿ ವಶಪಡಿಸಿಕೊಂಡ ಅಧಿಕಾರಿಗಳು ಅದರ ಸುರಕ್ಷತೆಗೂ ಒತ್ತು ನೀಡಬೇಕಾಗಿತ್ತು ಆದರೆ ಆ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.
ಒಂದು ವಾರದ ಹಿಂದೆ ವಶಕ್ಕೆ ಪಡೆದಿದ್ದ ಆಹಾರ ಸಾಮಗ್ರಿಗಳನ್ನು ಸ್ಥಳಾಂತರ ಮಾಡದ ಅಧಿಕಾರಿಗಳ ಬೇಜಾವಬ್ದಾರಿಯಿಂದಾಗಿಯೇ ಇಂದು ಆಹಾರ ಧಾನ್ಯಗಳು ನೀರುಪಾಲಾಗಿದೆ, ಈ ನಷ್ಟವನ್ನು ಅಧಿಕಾರಿಗಳೇ ತುಂಬಿಕೊಡಲು ಆಗ್ರಹಿಸಿದ ಅವರು, ಬಡವರ ಹೊಟ್ಟೆ ಮೇಲೆ ಬರೆ ಹಾಕುವ ಕೆಲಸ ಖಂಡನೀಯ ಎಂದು ಕಿಡಿಕಾರಿದರು.
ಮಳೆ ನಿಂತ ನಂತರ ನೂರಾರು ಮಂದಿ ಅಲ್ಲಿಗೆ ಭೇಟಿ ನೀಡಿ, ಆಹಾರ ಧಾನ್ಯಗಳು ಮಳೆಯಿಂದ ನೀರುಪಾಲಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದರು.
