ಬಂಗಾರಪೇಟೆ-ಕೆಜಿಎಫ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಜೂಜಾಟ, ಮಟ್ಕಾ ದಂಧೆಗೆ ಕಡಿವಾಣ ಹಾಕಿ ಬಡವರ ಕುಟುಂಬಗಳನ್ನು ರಕ್ಷಣೆ ಮಾಡಬೇಕೆಂದು ರೈತಸಂಘದ ಒತ್ತಾಯ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೆಜಿಎಫ್: ಬಂಗಾರಪೇಟೆ-ಕೆಜಿಎಫ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಜೂಜಾಟ, ಮಟ್ಕಾ ದಂಧೆಗೆ ಕಡಿವಾಣ ಹಾಕಿ ಬಡವರ ಕುಟುಂಬಗಳನ್ನು ರಕ್ಷಣೆ ಮಾಡಬೇಕೆಂದು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿ ಜು.23-7-2021ರ ಶುಕ್ರವಾರ ಎಸ್ಪಿ ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೆಜಿಎಫ್ ಹೊರವಲಯದ ಐಟಿಐ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೊರೊನಾ 1ನೇ, 2ನೇ ಅಲೆಯಿಂದ ಲಕ್ಷಾಂತರ ಕೂಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದೆ ಜೀವನ ನಿರ್ವಹಣೆ ಹಾಗೂ ಖಾಸಗಿ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ಕಾನೂನು ಭಯವಿಲ್ಲದೆ ಗಡಿ ಭಾಗಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಜೂಜಾಟ, ಮಟ್ಕಾ ದಂಧೆಯಿಂದ ಬಡವರ ಮಾಂಗಲ್ಯ ಹಾಗೂ ಪಡಿತರ ಅಕ್ಕಿ ಗಿರವಿ ಅಂಗಡಿಗಳ ಪಾಲಾಗುತ್ತಿವೆ.
ಇದರಿಂದ ಬಡವರಿಗೆ ಒಪ್ಪೊತ್ತಿನ ಊಟ ಇಲ್ಲದೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಕಣ್ಣೀರಿನಿಂದ ಕುಟುಂಬ ಕೈತೊಳೆಯುತ್ತಿದ್ದರೂ ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಬೆಳಗ್ಗೆಯಿಂದ ಸಂಜೆಯವರೆಗೂ ಕೂಲಿನಾಲಿ ಮಾಡಿ ಸಂಪಾದನೆ ಮಾಡಿದ 500 ರಿಂದ 1000 ರೂ ಹಣ ಸಂಸಾರದ ನಿರ್ವಹಣೆಗೆ ಉಪಯೋಗಿಸದೆ ಮಟ್ಕಾ, ಜೂಜಾಟ ಆಡುವ ಮುಖಾಂತರ ಹಣ ಕಳೆದುಕೊಂಡು ಮಧ್ಯಪಾನ ಮಾಡಿ ಮನೆಗೆ ಬರುವ ಹಣ ಕಳೆದುಕೊಂಡವರು ಮತ್ತೆ ಜೂಜಾಟ ಆಡಲು ಮನೆಯ ಹೆಂಡತಿ ಕೂಡಿಟ್ಟ ಸ್ತ್ರೀಶಕ್ತಿ ಸಾಲಗಳ ಹಣ ಹಾಗೂ ಕೂಲಿ ಹಣ ಕೊಡುವಂತೆ ಹೊಡೆದು-ಬಡಿದು ಸಾಯಿಸಿರುವ ಉದಾಹರಣೆಗಳು ಬೇಕಾದಷ್ಟಿವೆ.
ಗಡಿಭಾಗದ ಕಾಮಸಮುದ್ರ, ಬೂದಿಕೋಟೆ, ಬೇತಮಂಗಲ ನಗರ ವ್ಯಾಪ್ತಿಗಳಲ್ಲಿ ನಡೆಯುವ ಜೂಜಾಟ ಐಷಾರಾಮಿ ಲಾಡ್ಜ್‍ಗಳು, ರೆಸಾರ್ಟ್‍ಗಳು, ಸರ್ಕಾರಿ ಅರಣ್ಯಗಳಲ್ಲಿ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿದ್ದು, ಜೂಜಾಟ ಹಾಗೂ ಮಟ್ಕಾ ಆಡುತ್ತಿರುವ ದಂಧೆಕೋರರ ವಿರುದ್ಧ ಗೂಂಡಾ ಕಾಯಿದೆಯಡಿ ಕೇಸು ದಾಖಲಿಸಿ ಗಡಿಪಾರು ಮಾಡುವ ಮುಖಾಂತರ ಬಡ ಕುಟುಂಬಗಳನ್ನು ರಕ್ಷಣೆ ಮಾಡುವಂತೆ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿ ಮೇಲ್ಕಂಡ ದಿನಾಂಕದಂದು ಎಸ್ಪಿ ಕಚೇರಿ ಮುತ್ತಿಗೆ ಹಾಕುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೆಜಿಎಫ್ ತಾಲೂಕು ಅಧ್ಯಕ್ಷ ಬಸ್ ಮಂಜುನಾಥ್, ವಡ್ಡಹಳ್ಳಿ ವೆಂಕಟರವಣಪ್ಪ, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮಂಜುನಾಥ್, ಕದಿರಿನತ್ತ ಗುಲ್ಲಟ್ಟಿ, ಬೂದಿಕೋಟೆ ಹೋಬಳಿ ಅಧ್ಯಕ್ಷ ನಾಗಯ್ಯ, ಮರಗಲ್ ಮುನಿಯಪ್ಪ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನ, ಕಿರಣ್, ಚಾಂದ್‍ಪಾಷ ಮುಂತಾದವರಿದ್ದರು.