ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದಾದರೆ, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಬೇಕು : ವಿವಿಧ ಸಮುದಾಯಗಳ ಜನರು ಒತ್ತಾಯ

ಶ್ರೀನಿವಾಸಪುರ: ತಾಲ್ಲೂಕಿನ ರೋಜೇಹಳ್ಳಿ ಕ್ರಾಸ್‍ನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದಾದರೆ, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಬೇಕು ಎಂದು ವಿವಿಧ ಸಮುದಾಯಗಳ ಜನರು ಒತ್ತಾಯಿಸಿದ ಘಟನೆ ಮಂಗಳವಾರ ನಡೆಯಿತು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ರೋಜೇನಹಳ್ಳಿ ಕ್ರಾಸ್‍ಗೆ ಭೇಟಿ ನೀಡಿ, ಈಗಾಗಲೆ ರಸ್ತೆ ಮಧ್ಯಭಾಗ ವೃತ್ತದಲ್ಲಿ ಸ್ಥಾಪಿಸಲಾಗಿರುವ ಕೆಂಪೇಗೌಡರ ಪ್ರತಿಮೆ ತೆರವುಗೊಳಿಸಿ, ರಸ್ತೆ ಬಿದಯ ಕುಂಟೆ ಪಕ್ಕದಲ್ಲಿ ಸ್ಥಾಪಿಸುವಂತೆ ಸಲಹೆ ಮಾಡಿದರು. ಆ ಕಾರ್ಯಕ್ಕೆ ರೂ.10 ಲಕ್ಷ ನೀರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಲವರು ಡಾ. ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ, ಕೈವಾರ ನಾರಾಯಣಪ್ಪ, ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದು ಬಂದು, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಅವರ ಬೇಡಿಕೆಗೆ ಸ್ಪಂದಿಸಿದ ಸಂಸದ ಎಸ್.ಮುನಿಸ್ವಾಮಿ ಅವರು, ಕ್ರಾಸ್‍ನಲ್ಲಿ ಸರ್ಕಾರಿ ಜಮೀನು ಇರುವುದರಿಂದ, ಆ ಜಾಗದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಿ, ಎಲ್ಲ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಲಾಗುವುದು. ಇಲ್ಲಿನ ಜನರು ಶಾಂತಿಪ್ರಿಯರಾಗಿದ್ದು, ಯಾವುದೇ ವಿವಾದಕ್ಕೆ ಆಸ್ಪದ ನೀಡುವುದಿಲ್ಲ. ಕೆಂಪೇಗೌಡರ ಪುತ್ಥಳಿಯನ್ನು ರಸ್ತೆ ಮಧ್ಯಭಾಗದಿಂದ ತೆಗೆದು ಪಕ್ಕದಲ್ಲಿ ಸ್ಥಾಪಿಸಲು ಜಿಲ್ಲಾಧಿಕಾರಿ, ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿದ್ದ ಹಳೆ ಕಟ್ಟಡಗಳನ್ನು ಕೆಡವಲಾಯಿತು. ಕಟ್ಟಡ ಕೆಡವಲಾದ ಸ್ಥಳದಲ್ಲಿ ಅಂಗಡಿ ಮಳಿಗೆ ನಿರ್ಮಿಸಿ ಕೊಡುವಂತೆ ದಳಸನೂರು ಗ್ರಾಮ ಪಂಚಾಯಿತಿ ಪಿಡಿಒಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಮುಖಂಡರಾದ ಆರ್.ಎನ್.ಚಂದ್ರಶೇಖರ್, ರಾಮಚಂದ್ರೇಗೌಡ, ಶ್ರೀನಾಥರೆಡ್ಡಿ, ಆನಂದ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪಿಡಿಒ ಚಿನ್ನಪ್ಪ, ಡಿವೈಎಸ್‍ಪಿ ಕೆ.ಆರ್.ರಘು, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ್, ಎಂ.ಜಿ.ಲೋಕೇಶ್ ಇದ್ದರು.