ಶ್ರೀನಿವಾಸಪುರ : ಒಂದು ವಾರದ ಕಾಲ ಕಾಲಾವಧಿಯನ್ನು ಕೊಟ್ಟು ವಾರದ ಒಳಗೆ ಕಂಪನಿ ಅವರನ್ನು ಕರೆಸಿ ಸಭೆ ಮಾಡಿ ರೈತರಿಗೆ ಬರಬೇಕಾದಂತಹ ಇನ್ಸೂರನ್ಸ್ ಹಣವನ್ನು ಕೊಡಿಸದೆ ಇದ್ದಲ್ಲಿ ಕೋಲಾರ ಜಿಲ್ಲೆಯಾದ್ಯಾಂತ ಉಗ್ರ ರೀತಿಯ ಹೋರಾಟಕ್ಕೆ ಮಾವು ಬೆಳಗಾರರು ಮುಂದಾಗಬೇಕಾಗುತ್ತದೆ ಎಂದು ಜಿಲ್ಲಾ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಬುಧವಾರ ಜಿಲ್ಲಾ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಚ್ಡಿಎಫ್ಸಿ ಇರ್ಗೋ ಕಂಪನಿಯಿಂದ ಇನ್ಸೂರೆನ್ಸ್ನ್ನು ಅತಿ ಶೀಘ್ರವಾಗಿ ಬಿಡುಗಡೆ ಮಾಡಿಸುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿದರು.
ಆದರೆ ಮಾವು ಬೆಳಗಾರರು ಪ್ರತಿ ವರ್ಷದಂತೆ ಬೆಳೆ ವಿಮೆಯನ್ನು ಕಟ್ಟುತ್ತಿದ್ದಾರೆ. 2023 ರಲ್ಲಿ ಅತಿ ಹೆಚ್ಚು ಬೆಳೆ ನಷ್ಟವಾಗಿದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಮೆಯ ಹಣವನ್ನು ಕಂಪನಿಯವರು ಪಾವತಿ ಮಾಡುತ್ತಿದ್ದರು. ಈ ವರ್ಷ ಫೆಬ್ರವರಿ ತಿಂಗಳು ಬಂದರೂ ವಿಮೆ ಹಣವನ್ನು ಪಾವತಿ ಮಾಡದೇ ರೈತರಿಗೆ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಸುಮಾರು ಸಲ ಸಂಬಂದಪಟ್ಟ ಅಧಿಕಾರಿಗಳನ್ನು ಮತ್ತು ಕಂಪನಿಯವರನ್ನು ಸಂಪರ್ಕಿಸಿ ಮಾತನಾಡಿದಾಗ ದಿನಕ್ಕೊಂದು ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.
ಪ್ರತಿವರ್ಷ ಪ್ರಕೃತಿ ವಿಕೋಪಗಳಿಂದ ಮತ್ತು ಬೆಲೆ ಏರಿಳಿತಗಳಿಂದ ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಅದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಾವು ಬೆಳಗಾರರ ರಕ್ಷಣೆ ಮಾಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದವು.
ತಹಶೀಲ್ದಾರ್ ಜಿ.ಎನ್.ಸದೀಂದ್ರ ಮಾತನಾಡಿ ನಾನು ಸಂಬಂದಪಟ್ಟ ಕಂಪನಿ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಜಿಲ್ಲಾಧಿಕಾರಿಗಳ , ಸರ್ಕಾರದ ಗಮನಕ್ಕೂ ತರುತ್ತೇನೆ ಎಂದರು.