JANANUDI.COM NETWORK
ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ವಾರದೊಳಗೆ ಅಥವಾ ಪ್ರಥಮ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜನಾಕ್ರೋಶಕ್ಕೆ ಮಣಿಯದ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದರೂ ಮುಂದೆ ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಅಥವಾ ಪ್ರಥಮ ಅಧಿವೇಶನದಲ್ಲೇ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೂಲ ಮತಾಂತರ ನಿಷೇಧ ಕಾಯ್ದೆಯ ಕರಡು ರೂಪಿಸಲು ತಮ್ಮದೇ ಸರ್ಕಾರ ಕಾರಣ ಎಂದು ಯಡಿಯೂರಪ್ಪ ಮತ್ತು ಮತಾಂತರ ನಿಷೇಧ ಕಾಯ್ದೆ ಜಾರಿ ಆರ್.ಎಸ್.ಎಸ್ ನ ಉದ್ದೇಶವಾಗಿತ್ತು ಎಂದು ಈಶ್ವರಪ್ಪ ಅವರು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಕಾಯ್ದೆ ಆರ್.ಎಸ್.ಎಸ್ ನ ಕೂಸು ಎಂಬುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
2015 ರಲ್ಲಿ ಮತಾಂತರ ನಿಷೇಧ ಕಾಯ್ದೆಯ ಕಡತ ಸಂಪುಟ ಚರ್ಚೆಗೆ ಬರದಂತೆ ತಡೆಯಲು ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್. ಆಂಜನೇಯ ಅವರಿಗೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಷರಾ ಬರೆಯುವಂತೆ ಹೇಳಿದ್ದೇ ನಾನು. ನಮಗೆ ಇಂತಹ ಮನುಷ್ಯ ವಿರೋಧಿ ಕಾನೂನಿನಲ್ಲಿ ಹಿಂದೆಯೂ ಆಸಕ್ತಿ ಇರಲಿಲ್ಲ, ಈಗಲೂ ಅಸಕ್ತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ (ಮತಾಂತರ ನಿಷೇಧ ಮಸೂದೆ) ಜಾರಿಗೆ ಮೇಲ್ಮನೆಯಲ್ಲಿ ಬಹುಮತ ದೊರಕುವುದು ಅನುಮಾನವಾದದ್ರಿಂದ ಸಚಿವ ಸಂಪುಟದಲ್ಲಿ ಈ ಕುರಿತು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಅನುಷ್ಠಾನಗೊಳಿಸುತ್ತೇವೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಂಗಳೂರಿನಲ್ಲಿ ತಿಳಿಸಿದ್ದರು.