ಕೋಲಾರ,ನ.13: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕೆಲಸದ ಕಾರ್ಯವೈಖರಿ ಹಾಗೂ ಮನೋಭಾವ ಬದಲಾಯಿಸಿಕೊಂಡರೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತಗತಿಯಲ್ಲಿ ಕೊಡಬಹುದು. ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಬಹುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಕಾರ್ಯಪ್ರಗತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲೆಗೆ ಬಂದ ಮೇಲೆ ಹಿಂದೆ ಇದ್ದ ಸಿಬ್ಬಂದಿಯನ್ನೇ ಬಳಸಿಕೊಂಡು ಅವರ ಮನಪರಿವರ್ತನೆ ಮಾಡಿ, ಕಾರ್ಯವೈಖರಿ ಹಾಗೂ ಮನೋಭಾವ ಬದಲಾಯಿಸಿ ಕಂದಾಯ ಇಲಾಖೆಯ ಸೇವೆಗಳಲ್ಲಿ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದ್ದೇನೆ. ಕಂದಾಯ ಸಚಿವ ಕೃಷ್ಣಬೈರೇಗೌಡರ ಕಾರ್ಯವೈಖರಿಗೆ ತಕ್ಕಂತೆ ಕೆಲಸ ಮಾಡಿ ಅವರಿಂದ ಶಹಬ್ಬಾಸ್ಗಿರಿ ಗಿಟ್ಟಿಸಿಕೊಂಡಿದ್ದೇವೆ ಎಂದರು.
ಅಧಿಕಾರಿಗಳು, ಸಿಬ್ಬಂದಿಯಲ್ಲಿ ಹಿಂದೆ ಇದ್ದ ಕೆಂಪು ಪಟ್ಟಿ (ರೆಡ್ ಟೇಪಿಸಿಂ) ಧೋರಣೆ ಬದಲಾಗಿದೆ. ವಿವಿಧ ಸೇವೆ ನೀಡುವುದರಲ್ಲಿ ಕೊನೆಯ ಸ್ಥಾನದಲ್ಲಿದ್ದ ಜಿಲ್ಲೆ ಈಗ ಅಗ್ರಸ್ಥಾನಕ್ಕೆ ಬಂದಿದೆ. ಅದಕ್ಕಾಗಿ ಯಾರೊಬ್ಬರಿಗೂ ಷೋಕಾಸ್ ನೋಟಿಸ್ ಕೊಟ್ಟಿಲ್ಲ, ಒಬ್ಬರನ್ನೂ ಅಮಾನತುಗೊಳಿಸಿಲ್ಲ. ಆದರೆ, ಅವರಿಂದ ಒತ್ತಡ ಹಾಕಿ ಕೆಲಸ ತೆಗೆಸಿದ್ದೇನೆ ಎಂದು ಹೇಳಿದರು.
ಕಂದಾಯ ಇಲಾಖೆಯಡಿ ಅಟಲ್ ಜನಸ್ನೇಹಿ ಸೇವಾ ಕೇಂದ್ರದಲ್ಲಿ (ನಾಡಕಚೇರಿ/ನೆಮ್ಮದಿ ಕೇಂದ್ರ) ಸಾರ್ವಜನಿಕರಿಗೆ 45 ರೀತಿಯ ಸೇವೆ ನೀಡುತ್ತೇವೆ. ಹಿಂದೆ 26 ಸ್ಥಾನಕ್ಕಿಂತ ಮೇಲೆ ಹೋಗಿರಲಿಲ್ಲ. ತುಂಬಾ ಕಡಿಮೆ ಸೇವೆ ಹಾಗೂ ವಿಳಂಬವಾಗುತಿತ್ತು. ತಿಂಗಳಿಗೆ ಕೇವಲ 20 ಸಾವಿರ ಮಂದಿಗೆ ಸೇವೆ ನೀಡಲಾಗುತಿತ್ತು. ಈಗ 50 ಸಾವಿರ ಮಂದಿಗೆ ನೀಡುತ್ತಿದ್ದು, ಶೇ 250ರಷ್ಟು ಏರಿಕೆ ಆಗಿದೆ. 4 ದಿನಗಳಲ್ಲಿ ಸೇವೆ ನೀಡಲಾಗುತ್ತಿದೆ. ಜಿಲ್ಲೆಯ 27 ನಾಡಕಚೇರಿಗಳಲ್ಲಿ ಸಿಬ್ಬಂದಿ ಸ್ಪರ್ಧಾ ಮನೋಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೊಂದು ಅದ್ಬುತ ಬದಲಾವಣೆ. ಸತತ ಎಂಟು ತಿಂಗಳಿನಿಂದ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ. ಇದು ನಾನು ನಾನೊಬ್ಬ ಮಾಡಿದ ಸಾಧನೆ ಅಲ್ಲ; ಕಚೇರಿಯ ಸಿಬ್ಬಂದಿಗೆ ಸಿಗಬೇಕಾದ ಮನ್ನಣೆ ಎಂದು ಮಾಹಿತಿ ನೀಡಿದರು.
ಸಕಾಲ ಯೋಜನೆಯಡಿ 600 ಸೇವೆಗಳಿಂದ್ದು, 31 ಇಲಾಖೆಗಳು ಇದರಡಿ ಬರುತ್ತವೆ. ವಿಳಂಬವಿಲ್ಲದೆ 80 ಸಾವಿರ ರೀತಿಯ ಸೇವೆಗಳನ್ನು ಸಕಾಲದಲ್ಲಿ ನೀಡುತ್ತಿದ್ದೇವೆ. ಹಿಂದೆ 40 ಸಾವಿರ ಸೇವೆ ನೀಡುತ್ತಿದ್ದು, 29ನೇ ಸ್ಥಾನದಲ್ಲಿದ್ದೇವೆ. ಈಗ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ನಾನು ನಿತ್ಯ ನಿಗಾ ವಹಿಸಿ ಸಿಬ್ಬಂದಿಯನ್ನು ಚುರುಕುಗೊಳಿಸಿ ತ್ವರಿತಗತಿಯಲ್ಲಿ ಸೇವೆ ನೀಡಲು ಕ್ರಮ ವಹಿಸಿದ್ದೇನೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಪಿಎಂ ಕಿಸಾನ್ (ರೈತರಿಗೆ ವರ್ಷಕ್ಕೆ 6000) ಯೋಜನೆಯಡಿ ಆರ್ಟಿಸಿಗೆ ಖಾತೆ ಜೋಡಣೆ ಶೇ 70 ಆಗಿತ್ತು. ಈಗ ಈ ಯೋಜನೆಯಡಿ ಶೇ 98 ಪ್ರಗತಿ ಆಗಿದ್ದು ರೈತರ ಖಾತೆ ನೇರ ಹಣ ಹೋಗುತ್ತಿದೆ. ಫ್ರೂಟ್ಸ್ ಐಡಿ ಪರಿಷ್ಕೃತ ಮಾಡಿ ಎಲ್ಲಾ ರೈತರ ಖಾತೆ ಪರಿಷ್ಕೃತಗೊಳಿಸಲಾಗಿದೆ. ಬೆಳೆ ಹಾನಿ, ಬರಗಾಲ ಸಂಬಂಧ ಪರಿಹಾರ ಪಡೆಯಲು ಫ್ರೂಟ್ಸ್ ಐಡಿ ನೆರವಾಗುತ್ತದೆ. ಇದರಲ್ಲಿ ಶೇ 95 ಪ್ರಗತಿ ಆಗಿದ್ದು, ಹಿಂದೆ ರೈತರೇ ಬೇರೆ, ಅವರ ಖಾತೆಯೇ ಬೇರೆ ಆಗಿರುತಿತ್ತು. ಯಾರೂ ಪರಿಹಾರ ಪಡೆಯುತ್ತಿದ್ದರು. ಈಗ ನೇರವಾಗಿ ಫಲಾನುಭವಿಗಳ ಖಾತೆಗೆ ಪರಿಹಾರ ಹೋಗುತ್ತಿದೆ ಎಂದರು.
ಜಿಲ್ಲೆಯಲ್ಲಿ 10 ಲಕ್ಷ ಆರ್ಟಿಸಿ ಇವೆ. ಈವರೆಗೆ 9.2 ಲಕ್ಷ ಆರ್ಟಿಸಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಪರಿಹಾರ ನೀಡುವಾಗ ಮಾಹಿತಿ ಸಿಗುತ್ತಿದ್ದು, ಮೋಸ ಮಾಡುವುದು ನಿಂತು ಹೋಗಿದೆ. ಜಿಲ್ಲೆಯು ಶೇ 92 ಜೋಡಣೆಯೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಇದೆ ಎಂದು ತಿಳಿಸಿದರು.
ಸರ್ಕಾರಿ ಜಮೀನು ಸಂರಕ್ಷಣೆಗೆ ಲ್ಯಾಂಡ್ ಬೀಟ್ ಯೋಜನೆ ಮಾಡಿದ್ದೇವೆ. ಗೋಮಾಳ, ಕೆರೆ ಸೇರಿದಂತೆ ಜಿಲ್ಲೆಯಲ್ಲಿ 34 ಸಾವಿರ ಸರ್ಕಾರಿ ಸ್ವತ್ತು ಇವೆ. ಈಗ ಲ್ಯಾಂಡ್ ಬೀಟ್ ಮೂಲಕ ಜಿಯೊ ಫೆನ್ಸಿಂಗ್ ಮಾಡಲಾಗಿದೆ. ಪೊಲೀಸರ ಬೀಟ್ ರೀತಿ ಕಂದಾಯ ಅಧಿಕಾರಿಗಳು ಆ್ಯಪ್ ಹಿಡಿದು ಲ್ಯಾಂಡ್ ಬೀಟ್ ಮಾಡುತ್ತಾರೆ. ಒತ್ತುವರಿ ಆಗಿದ್ದರೆ ತೆರವುಗೊಳಿಸುತ್ತಾರೆ. ಲ್ಯಾಂಡ್ ಬೀಟ್ನಲ್ಲೂ ಕೋಲಾರ ಜಿಲ್ಲೆ ಅಗ್ರಸ್ಥಾನದಲ್ಲಿದೆ ಎಂದು ನುಡಿದರು.
ಖಾತೆಗಳ ಬದಲಾವಣೆಯಲ್ಲಿ ವಿಳಂಬ ತಪ್ಪಿಸಲು ಸತತ ಪ್ರಯತ್ನ ಹಾಕಲಾಗಿದೆ. ತ್ವರಿತಗತಿಯಲ್ಲಿ ಖಾತೆ ಮಾಡಿಕೊಡುತ್ತಿದ್ದೇವೆ. ಪ್ರತಿ ತಿಂಗಳು ಐದು ಸಾವಿರ ಖಾತೆ ಮಾಡಿಕೊಡಲಾಗುತ್ತಿದೆ. ಕಚೇರಿಗೆ ಬಾರದೆ ಆನ್ ಲೈನ್ನಲ್ಲಿಯೇ ಈ ಸೇವೆ ಪಡೆಯಬಹುದಾಗಿದೆ ಎಂದರು.
ಜಿಲ್ಲೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಕೋರ್ಟ್ನಲ್ಲಿ ಎಂಟು ಸಾವಿರ ಕೇಸ್ ಇದ್ದವು. ಉಪವಿಭಾಗಾಧಿಕಾರಿ ಕಚೇರಿಯಲ್ಲಿಯೇ ಐದು ಸಾವಿರ ಕೇಸ್ಗಳಿವೆ. ತಹಶೀಲ್ದಾರ್ ಕೋರ್ಟ್ನಲ್ಲೂ ಕೇಸ್ ಇವೆ. ಒಟ್ಟು 19 ಸಾವಿರಲ್ಲಿ ಕೇಸ್ಗಳಲ್ಲಿ 16 ಸಾವಿರ ಕೇಸ್ಗಳನ್ನು ಒಂದು ವರ್ಷದಲ್ಲಿ ವಿಲೇವಾರಿ ಮಾಡಲಾಗಿದೆ. ತಹಶೀಲ್ದಾರ್ ಕೋರ್ಟ್ನಲ್ಲಿ ಮೂರು ಸಾವಿರ ಕೇಸ್ಗಳಿದ್ದು ಹೆಚ್ಚುವರಿ ಇಬ್ಬರು ಉಪವಿಭಾಗಾಧಿಕಾರಿಗಳು ಬರಲಿದ್ದು, ಶೀಘ್ರದಲ್ಲೇ ವಿಲೇವಾರಿ ಮಾಡಲಿದ್ದೇವೆ. ಹೊಸದಾಗಿ ಕೋರ್ಟ್ ಹಾಲ್ ಕೂಡ ಮಾಡಲಾಗಿದೆ ಎಂದು ವಿವರಿಸಿದರು.
ನಾನು ಜಿಲ್ಲೆಗೆ ಬಂದಾಗ 25 ಸಾವಿರ ಜನರಿಗೆ ಪಿಂಚಣಿ ಹೋಗುತ್ತಿರಲಿಲ್ಲ. ಈಗ ಅವರಿಗೆ ಪಿಂಚಣಿ ಕೊಡಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ವಿವಿಧ ಸರ್ಕಾರಿ ಕಚೇರಿಗಳಿಗೆ ಜಾಗ ಕೊಡುವ ಕೆಲಸವನ್ನೂ ಮಾಡುತ್ತಿದ್ದೇವೆ. ಶಾಲೆಗಳ ದಾಖಲೆ ಅಪ್ಡೇಟ್ ಮಾಡಿದ್ದು, ರಾಜ್ಯದಲ್ಲಿ ಈ ಕಾರ್ಯ ಮಾಡಿದ ಮೊದಲ ಜಿಲ್ಲೆ ಕೋಲಾರ. ಜಿಲ್ಲೆಯಲ್ಲಿ 1953 ಶಾಲೆಗಳಿದ್ದು, ಡಿಡಿಪಿಐ ಕೇಳಿದರೆ ಒಂದೂ ರೆಕಾರ್ಡ್ ಇರಲಿಲ್ಲ. ಹೀಗಾಗಿ, ಅಭಿಯಾನ ಆರಂಭಿಸಿದೆವು. ಮೂರು ತಿಂಗಳಲ್ಲಿ 1,600 ಶಾಲೆಗಳಿಗೆ ಖಾತೆ, ಇ ಸೊತ್ತು, ಆರ್ಟಿಸಿ ಮಾಡಿಕೊಟ್ಟೆವು. ಶಿಕ್ಷಣ ಇಲಾಖೆಗೆ ಕಳುಹಿಸಿಕೊಟ್ಟಾಗ ಇದು ಮಾದರಿಯಾಗಿದ್ದು, ಇಡಿ ರಾಜ್ಯಕ್ಕೆ ವಿಸ್ತರಣೆ ಮಾಡುವುದಾಗಿ ಹೇಳಿ ಅಭಿನಂದನೆ ಸಲ್ಲಿಸಿದ್ದಾರೆ. ಅಂಗನವಾಡಿಗೆ 650ದಾಖಲೆ ಮಾಡಿಕೊಟ್ಟೆವು. 400ನಿವೇಶನ ನೀಡಲಾಗಿದೆ. ನಾಳೆ ಯಾರೂ ಒತ್ತುವರಿ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಕೆಜಿಎಫ್ನಲ್ಲಿ ರಿಸರ್ವ್ ಪೊಲೀಸ್ಗೆ 100 ಎಕರೆ ಜಾಗ ಕೊಡಲಾಗಿದೆ. ಕೈಗಾರಿಕಾ ಪ್ರದೇಶ ಉದ್ದೇಶಕ್ಕೆ ಕೆಐಎಡಿಬಿಗೆ 600 ಎಕರೆ ಜಾಗ ಕೊಡಲಾಗಿದೆ. 300 ಎಕರೆಯನ್ನು ಟೌನ್ಶಿಪ್ಗೆ ನೀಡಲಾಗಿದೆ. ಪೊಲೀಸ್ ಇಲಾಖೆಗೂ ಜಾಗ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಬಗರ್ ಹುಕುಂನಡಿ ಈಗ ಆನ್ಲೈನ್ನಲ್ಲಿ ಅರ್ಜಿ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಭೂಮಂಜೂರಾತಿಗೆ 68 ಸಾವಿರ ಅರ್ಜಿಗಳು ಬಂದಿದ್ದು, ವಿವಿಧ ಕಾರಣಕ್ಕೆ 28 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸ್ಯಾಟಲೈಟ್ ಇಮೇಜ್ ಮೂಲಕ ಎಷ್ಟು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಭೂ ಮಂಜೂರಾತಿ ಮಾಡಬಹುದು ಎಂದರು.
ಎಲ್ಲಾ ದಾಖಲೆಗಳ ಸಂರಕ್ಷಣೆಗಾಗಿ ಈ ಆಫೀಸ್ ಜಾರಿ ಮಾಡಲಾಗಿದೆ. ಸಿಬ್ಬಂದಿ ಕಾರ್ಯವೈಖರಿಯನ್ನು ಟ್ರ್ಯಾಕ್ ಮಾಡಬಹುದು. ಮೋಸ, ವಂಚನೆ ತಪ್ಪಿಸಬಹುದು. ದಾಖಲೆ ಕಳೆದ ಹೋಗಲ್ಲ ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಭೂದಾಖಲೆ ಸಂರಕ್ಷತಾ ಯೋಜನೆ ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಡಿ ಆನ್ಲೈನ್ನಲ್ಲಿ ತಮ್ಮ ಅರ್ಜಿಗಳನ್ನು ನೋಡಬಹುದು, ಎಲ್ಲವೂ ಪಾರದರ್ಶಕವಾಗಿರಲಿದೆ ಎಂದರು.
ರಾಜಕೀಯ ವ್ಯಕ್ತಿಗಳ ಟೀಕೆಗೆ ಪ್ರತಿಕ್ರಿಯಿಸಿ, ನಾನು ಕಾನೂನಿನ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಕಾನೂನುಬಾಹಿರ ಕೆಲಸ ಮಾಡದಂತೆ ಸಿಬ್ಬಂದಿಗೂ ಸೂಚಿಸಿದ್ದೇನೆ. ಪಕ್ಷಗಳು, ಸಂಘಟನೆ ಏನು ಹೇಳುತ್ತೇವೆ ಎಂಬುದಕ್ಕೆ ಗಮನ ಕೊಡಲ್ಲ ಎಂದು ಹೇಳಿದರು.
ಕೆರೆಗಳ ಒತ್ತುವರಿ ವಿಚಾರವಾಗಿ ಪ್ರತಿಕ್ರಿಯಿಸಿ, ‘ಈ ಸಂಬಂಧ ಸಭೆ ನಡೆಸಿದ್ದು, ಕ್ರಮ ವಹಿಸಲಾಗುವುದು. ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದ್ದು, ಸಮೀಕ್ಷೆ ನಡೆಸಲಾಗುವುದು. ಬಳಿಕ ಬಯೋ ಫೆನ್ಸಿಂಗ್ ಮಾಡಿ ಕೆರೆಗಳ ಸಂರಕ್ಷಣೆ ಮಾಡಲಾಗುವುದು ಎಂದು ತಿಳಿಸಿದರು.
ಸಿಬ್ಬಂದಿ ಕೊರತೆ ಬಗ್ಗೆ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಶೇ 25 ಸಿಬ್ಬಂದಿ ಕೊರತೆ ಇದೆ. ಆದರೆ, ಮನೋಭಾವ ಬದಲಾಯಿಸಿ ಇರುವ ಸಿಬ್ಬಂದಿಯಲ್ಲಿಯೇ ಕೆಲಸ ಮಾಡಿಸುತ್ತಿದ್ದೇನೆ ಎಂದರು.
ಗಾಂಧಿ ಭವನಕ್ಕೆ ಟಮಕದಲ್ಲಿ ಉಚಿತವಾಗಿ ಸಿಎ ಸೈಟ್ ಕೊಡಲಾಗುವುದು. ಈಗ ಇರುವ ಜಾಗದಲ್ಲಿ ಮಾಡುವ ನಿರ್ಧಾರ ಕೈಬಿಡಲಾಗಿದೆ ಎಂದು ಹೇಳಿದರು.
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಹಿಂದೆ 6ನೇ ಸ್ಥಾನದಲ್ಲಿದ್ದ ಜಿಲ್ಲೆ, ಈಗ 20ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗೆ ಭೇಟಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಚಲುವನಹಳ್ಳಿ ಕೆರೆಯ 36 ಎಕರೆ ಜಮೀನು ಕೊಡಲಾಗುವುದು. ಸುತ್ತಮುತ್ತಲಿನ ಜಾಗವೂ ಸಿಗಲಿದೆ’ ಎಂದರು.
ಸರ್ಕಾರಿ ಜಾಗದ ಖಾತೆ ವಕ್ಫ್ ಎಂದು ಜಿಲ್ಲೆಯಲ್ಲಿ ನಮೂದಾಗಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗಿಲ್ಲ. ಯಾವುದೇ ರೈತರ ಜಮೀನನ್ನು ವಕ್ಫ್ಗೆ ನೀಡಿಲ್ಲ. ಮುದುವಾಡಿ ಸರ್ಕಾರಿ ಶಾಲೆಯದ್ದು ವಕ್ಫ್ ಜಾಗ. ಆದರೂ ಶಾಲೆಗೇ ಆರ್ಟಿಸಿ ಮಾಡಿಕೊಡಲಾಗಿದೆ’ ಎಂದು ಹೇಳಿದರು.
ಯಾವುದೇ ಅಧಿಕಾರಿಗೆ ವರ್ಗಾವಣೆ ಸಹಜ. ಒಂದೇ ಕಡೆ ಶಾಶ್ವತವಾಗಿ ಇರಲು ಆಗಲ್ಲ. ಅದಕ್ಕೆ ಸಿದ್ಧರಾಗಿರಬೇಕು. ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ನಡೆದಿದ್ದು, ನಗರಾಭಿವೃದ್ಧಿ ಇಲಾಖೆ ಸವಾಲಾಗಿದೆ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ.ಮುನಿರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.