ಕೋಲಾರ,ಮೇ.27: ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ಕುರಿತು ಅರಿವು ಹಾಗೂ ತರಬೇತಿ ಪಡೆದು ಸಕಾಲದಲ್ಲಿ ತೊಂದರೆಗೊಳಗಾದವರಿಗೆ ನೆರವು ನೀಡಿದಾಗ ಅಮೂಲ್ಯವಾದ ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರದ ತುರ್ತು ಚಿಕಿತ್ಸ ವಿಭಾಗದ ಕನ್ಸಲ್ಟೆಂಟ್ ಡಾ.ರಾಜೇಶ್ ಅವರು ತಿಳಿಸಿದರು.
ತುರ್ತು ವೈದ್ಯಕೀಯ ಚಿಕಿತ್ಸಾ ದಿನಾಚರಣೆ ಅಂಗವಾಗಿ ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ, ಇಂದು ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ತುರ್ತು ಆರೋಗ್ಯ ಸಂದರ್ಭಗಳಲ್ಲಿ ಪರಿಹಾರದ ವಿಧಾನಗಳು ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
ವಿವಿಧ ರೀತಿಯ ಕಾರಣ ಹಾಗೂ ಪ್ರಜ್ಞೆತಪ್ಪಿದ, ಉಸಿರಾಟದ ತೊಂದರೆಗೆ ಒಳಗಾದ, ಅಪಘಾತ-ಅಘಾತಕ್ಕೆ ಒಳಗಾದ, ವಿಷ ಜಂತುಗಳ ಕಡಿತಕ್ಕೆ ಒಳಗಾದ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸುವ ಮೊದಲು, ಸಂದರ್ಭಾನುಸಾರ ಪರಿಸ್ಥಿತಿಯನ್ನು ಅವಲೋಕಿಸಿ ನೀಡುವ ಪ್ರಥಮ ಚಿಕಿತ್ಸೆಯ ಉಪಚಾರದಿಂದ ವ್ಯಕ್ತಿಯ ಜೀವವನ್ನು ಉಳಿಸಬಹುದು ಎಂದರು.
ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರದ ಸಹಾಯಕ ಪ್ರೊ.ಡಾ.ಕೃಷ್ಣಮೂರ್ತಿ ಮಾತನಾಡಿ, ಅಪಘಾತ ಸಂಭವಿಸಿದ ವೇಳೆ ಅವರು ಯಾರೇ ಆಗಿರಲಿ ಅವರನ್ನು ಅಪಾಯದಿಂದ ಪಾರು ಮಾಡುವುದು ಮುಖ್ಯ. ಸುರಕ್ಷಿತವಾಗಿ ಆಸ್ಪತ್ರೆಗೆ ಕೊಂಡೊಯ್ಯಬೇಕು. ಕೈ, ಕಾಲು, ತಲೆ ಯಾವ ಭಾಗಕ್ಕಾದರೂ ಪೆಟ್ಟಾಗಿರಬಹುದು. ಕುತ್ತಿಗೆಯಿಂದ ಶ್ವಾಸಕೋಶಕ್ಕೆ ಸಂಬಂಧ ಕಲ್ಪಿಸಿರುವ ಉಸಿರಾಟದ ನರಬಳ್ಳಿಗೆ ಹೆಚ್ಚು ಒತ್ತಡವಾಗದಂತೆ ನೋಡಿಕೊಳ್ಳಬೇಕು ಎಂದ ಅವರು, ವಿಷಕಾರಿ ಹಾವುಗಳು, ನಾಯಿ, ಕೋತಿ, ಬೆಕ್ಕು, ಜೇನುನೊಣ ಸೇರಿದಂತೆ ಕಡಿತದ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕೆಲವು ತುರ್ತು ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದರು.
ಸಂಕಷ್ಟಕ್ಕೆ ಒಳಗಾದ ವ್ಯಕ್ತಿಯ ಬಗ್ಗೆ ಸಮೀಪದ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ನ್ ನ್ನು ಕರೆಸಿಕೊಳ್ಳಬೇಕು ಅದು ಬರುವವರೆಗೂ ಇಲ್ಲವೆ ಆಸ್ಪತ್ರೆಗೆ ನಾವೇ ಸಾಗಿಸುವವರೆಗೂ ನೀಡುವ ಪ್ರಾಥಮಿಕ ಚಿಕಿತ್ಸೆ ನೀಡಬೇಕು, ಆಸ್ಪತ್ರೆಗೆ ಸಾಗಿಸಿದ ನಂತರ ಯಾವ ಸಮಯದಲ್ಲಿ ಯಾವ ರೀತಿ ಯಾವ ಕಾರಣದಿಂದ ಆಗಿದೆ ಎಂದು ವೈದ್ಯರಿಗೆ ನಿಖರ ಮಾಹಿತಿ ಹಾಗೂ ಸಾಂದರ್ಭಿಕ ಆಧಾರಗಳನ್ನು ನೀಡಿದ್ದಲ್ಲಿ ವೈದ್ಯರು ಮುಂದಿನ ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಅಪಘಾತವಾದಾಗ ಮೊದಲ ಒಂದು ಗಂಟೆ ಅತ್ಯಮೂಲ್ಯವಾದುದು. ಅದನ್ನು ಸರಿಯಾಗಿ ಬಳಸಿಕೊಂಡರೆ ಜೀವ ಉಳಿಸಬಹುದು. ಈ ವಿಷಯವನ್ನು ಎಲ್ಲರೂ ತಿಳಿದುಕೊಂಡಿರಬೇಕು. ಯಾವುದೇ ಅನಾಹುತ ಸಂಭವಿಸಿದಾಗ ಜನರು ಗಾಬರಿಯಾಗದೇ ಜೀವವನ್ನು ರಕ್ಷಿಸುವ ಸರಳ ವಿಧಾನಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸೀನಿಯರ್ ರೆಸಿಡೆಂಟ್ಗಳಾದ ಡಾ.ಚಂದ್ರಕೀರ್ತಿ, ಡಾ.ಈಶ್ವರ್ ಪ್ರಥಮ ಚಿಕಿತ್ಸೆಯ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಗಾರದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ ಸೇರಿದಂತೆ ಅನೇಕ ಪತ್ರಕರ್ತರು ಹಾಜರಿದ್ದರು.