ಕೋಲಾರ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1 ಲಕ್ಷದವರೆಗೂ, ರೈತರಿಗೆ 5 ಲಕ್ಷದವರೆಗೂ ಶೂನ್ಯ ಬಡ್ಡಿ ಸಾಲ ಸೌಲಭ್ಯ, ಸಾಲದ ಕಂದು ಸಮರ್ಪಕವಾಗಿ ಪಾವತಿಸುವ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ತಾಲ್ಲೂಕಿನ ವೇಮಗಲ್ ಕ್ರೀಡಾಂಗಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಶಕ್ತಿಪ್ರದರ್ಶನವೆಂಬಂತೆ ಆಯೋಜಿಸಿದ್ದ ರೈತ ಮಹಿಳೆಯರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿ. ‘ಹಿಂದೆ ಮುಚ್ಚಿಹೋಗಿದ್ದ ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕಾಗಿ ಮಹಿಳೆಯರಿಗೆ ಬಡ್ಡಿರಹಿತ 50 ಸಾವಿರ ಸಾಲ ನೀಡಿದ್ದೇನೆ, ಮುಂದಿನ ದಿನಗಳಲ್ಲಿ 10 ಲಕ್ಷದವರೆಗೂ ನೀಡುತ್ತಿದ್ದ ಶೇ.3 ಬಡ್ಡಿ ಸಾಲವನ್ನು 20 ಲಕ್ಷಕ್ಕೇ ಏರಿಸುವುದಾಗಿ ಘೋಷಿಸಿದರು.
ಕೋಲಾರದಲ್ಲಿ ರೈತರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು, ಟೊಮೇಟೊ, ಮಾವು ಸಂಸ್ಕರಣಾ ಘಟಕ ಮಾಡಿಕೊಡ್ತೇವೆ. ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಮಸೂದೆ ವಾಪಸ್ ಪಡೆಯುತ್ತೇವೆ ಎಂದರು.
ಹಾಲಿನ ಪ್ರೋತ್ಸಾಹ ಧನ 5 ರೂ ಇದ್ದು 6 ರೂ ನೀಡಲಾಗುವುದು ಎಂದ ಅವರು, ಕೆ.ಎಚ್.ಮುನಿಯಪ್ಪ ಮನವಿಯಂತೆ 3ನೇ ಹಂತದ ಶುದ್ಧೀಕರಣ ಮಾಡಿ ಕೆಸಿ ವ್ಯಾಲಿ ನೀರು ಹರಿಸಲು ಕ್ರಮವಹಿಸುವುದಾಗಿ ತಿಳಿಸಿದ ಅವರು, ಎತ್ತಿನಹೊಳೆ ಯೋಜನೆ ನಾವು ಆರಂಭಿಸಿದ್ದೆವು ಈಗಿನ ಸರಕಾರ ನಿಲ್ಲಿಸಿದೆ ನಾವು ಬಂದರೆ ಮತ್ತೆ ಚಾಲನೆ ನೀಡಿ 2 ವರ್ಷಗಳಲ್ಲಿ ಪೂರ್ಣಗೊಳಿಸಿ ಶುದ್ಧ ಕುಡಿಯುವ ನೀರು ನೀಡುತ್ತೇವೆ ಎಂದರು.
ಕೆಸಿವ್ಯಾಲಿಗೆ 1400 ಕೋಟಿ ರೂ ನೀಡಿ ಜಾರಿಗೆ ಮಾಡಿದ್ದೆವು ಆಗ ಬಿಜೆಪಿಯವರು, ಜೆಡಿಎಸ್ ನವರು ಜಾರಿ ಬದಲು ವಿರೋಧ ಮಾಡಿದ್ದರು ಎಂದು ಟೀಕಿಸಿದ ಅವರು, 200 ಯುನಿಟ್, 2 ಸಾವಿರರೂ ಜೀವನ ನಿರ್ವಹಣೆಗೆ ನೀಡ್ತೇವೆ. 7 ಕೆಜಿ ಅಕ್ಕಿ 5 ಕೆಜಿ ಆಗಿದೆ 10 ಕೆಜಿ ಕೊಡ್ತೇವೆ ಎಂದರು.
ಯಡಿಯೂರಪ್ಪ ಅವರನ್ನು ಕೇಳಿದರೆ ಹಣ ಇಲ್ಲ ಅಕ್ಕಿ ಕೊಡೋಕೆ ಅಂತಾರೆ. ಲೂಟಿ ಮಾಡಿಲ್ವಾ ಆ ಹಣ ಖರ್ಚು ಮಾಡಿ ಅಂತ ಹೇಳಿದ್ದೇನೆ. ನಾವು ಅಧಿಕಾರದಲ್ಲಿದ್ದಾಗ ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ಮೊಸಳೆ ಕಣ್ಣೀರು ಹಾಕಿ ದ್ವೇಷ ಹುಟ್ಟು ಹಾಕ್ತಾರೆ. ಹಿಂದೂ ಮುಸ್ಲಿಂ ಮೇಲೆ. ಮಾತು ಮಾತ್ರ ಸಬ್ ಕಾ ಸಾತ್ ಅಂತಾರೆ. ದಲಿತರು, ಹಿಂದುಳಿದವರು, ಬಡವರು ಅಲ್ಪಸಂಖ್ಯಾತರು ಅದರ ಒಳಗೆ ಬರಲ್ವಾ. ಮುಂದಿನ ಚುನಾವಣೆಯಲ್ಲಿ ಕೋಲಾರ ಕ್ಷೇತ್ರ ಅಲ್ಲದೆ ಜಿಲ್ಲೆಯ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಗೋವಿಂದಗೌಡರ ಆಹ್ವಾನದಂತೆ ಬಂದೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರು ಕೆಲವು ದಿನಗಳ ಹಿಂದೆ ಬಂದು, ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶಕ್ಕೆ ಆಹ್ವಾನಿಸಿದ್ದರು. ಯಾವುದೇ ಸಮಾಜ ಪುರುಷರು, ಮಹಿಳೆಯರ ನಡುವೆ ಸಮಾನತೆ ಇಲ್ಲದಿದ್ದರೆ ಶೋಷಣೆ ಆಗುತ್ತದೆ. ಈ ರೀತಿಯಲ್ಲಿ ಮಹಿಳೆಯರು ಸೇರಲು, ಸಮಾವೇಶ ಯಶಸ್ವಿಯಾಗಲು ಗೋವಿಂದಗೌಡರೇ ಕಾರಣ ಎಂದು ಧನ್ಯವಾದ ಸಲ್ಲಿಸಿದರು.
ಮಹಿಳೆಯರಿಗೆ ಶಕ್ತಿ ನೀಡಿದರೆ ದೇಶದ ಸಮಗ್ರ ಅಭಿವೃದ್ಧಿ ಆಗುತ್ತದೆ. ಈಗಾಗಲೇ ಅಗತ್ಯವಸ್ತುಗಳು, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಹೆಚ್ಚಿನ ತೆರಿಗೆ ವಿಧಿಸುವ ಪ್ರಮೇಯವನ್ನು ಬಿಜೆಪಿ ಸರಕಾರ ಚಿತೆರಿಗೆ ಕಡಿಮೆಮಾಡಬೇಕು, ಮೋದಿ ಬಂದ ಮೇಲೆ ಅಂಬಾನಿ, ಅದಾನಿಯಂತಹ ಕುಳಗಳು, ಉದ್ಯಮಿಗಳು, ಬಂಡವಾಳ ಶಾಹಿಗಳ 14 ಲಕ್ಷಕೋಟಿ ಸಾಲ ಮನ್ನಾ. ಬಡವರು, ಮಹಿಳೆಯರದ್ದು 1 ರೂಪಾಯಿ ಸಾಲಮನ್ನಾ ಮಾಡಿಲ್ಲ ಎಂದರು.
ಸಾಲ ಮನ್ನಾ ನರೇಂದ್ರ ಮೋದಿ, ಬಿಎಸ್ ವೈ, ಬೊಮ್ಮಾಯಿ ಮಾಡಲಿಲ್ಲ. ಮನಮೋಹನ್ ಸಿಂಗ್ 72 ಸಾವಿರ ಕೋಟಿ ಮನ್ನಾ ಮಾಡಿದ್ದರು. ಇತ್ತೀಚೆಗೆ ತೇಜಸ್ವಿ ಸೂರ್ಯ ಹೇಳಿದ್ದಾನೆ ರೈರ ಸಾಲ ಮನ್ನಾದಿಂದ ಏನೂ ಪ್ರಯೋಜನವಾಗಲ್ಲವೆಂದು. ಸಂಸದಾನಗಿರುವ ನೀನು ಬಡವರ ಮೇಲೆ ಯಾಕೆ ಕೆಟ್ಟು ಕಣ್ಣು ಇಟ್ಟುಕೊಂಡಿದ್ದೀಯ. ಬಡವರು, ರೈತರು, ಮಹಿಳೆಯರ ವಿರೋಧಿ ಧೋರಣೆ ಬಿಡಬೇಕಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಭಿವೃದ್ಧಿ ಶೂನ್ಯವಾಗಿದ್ದು ಜನರು ಕಾಂಗ್ರೆಸ್ ಬೆಂಬಲಿಸಲು ತೀರ್ಮಾನಿಸಿದ್ದಾರೆ. ಜನರ ಆಶೀರ್ವಾದ ಪಡೆದು ಸರಕಾರ ರಚಿಸಿದ ಬಳಿಕ 10 ಲಕ್ಷರೂ ಬಡ್ಡಿ ರಹಿತ ಸಾಲದ ಘೋಷಣೆ ಮಾಡಬೇಕು. ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಘೋಷಣೆ ಮಾಡಬೇಕು. ನಾವೆಲ್ಲರೂ ಈಗಾಗಲೇ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ವೈಫಲ್ಯಗಳ ವಿರುದ್ಧ ಆಕ್ರೋಶ ಜೋರಾಗಿದೆ ಎಂದರು.
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, 6.42ಲಕ್ಷ ಮಹಿಳೆಯರಿಗೆ ಅವಿಭಜಿತ ಜಿಲ್ಲೆಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗಿದೆ. ಕೋಲಾರ ಡಿಸಿಸಿ ಬ್ಯಾಂಕ್ 7-8 ವರ್ಷಗಳ ಹಿಂದೆ ಮುಚ್ಚಿ ಹೋಗಿತ್ತು ಅಂತಹ ಸಮಯದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಸಮಸ್ಯೆ ವಿವರಿಸಿ, ಬ್ಯಾಂಕ್ ಮುಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಯಾರಿಗೂ ಸಾಲ ಸಿಗುತ್ತಿಲ್ಲ ಎಂದು ಹೇಳಿದ್ದೆವು.
ಕೂಡಲೇ ಆದೇಶ ಮಾಡಿ ಪುನಶ್ಚೇತನಕ್ಕೆ ಸೂಚಿಸಿದ್ದರು. ಇದೀಗ ಸಾಲ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಸಿದ್ದರಾಮಯ್ಯ. ಮನೆಯಲ್ಲಿ ಪ್ರತಿಯೊಂದು ಕೆಲಸ ಮಹಿಳೆಯರು ಮಾಡ್ತಾರೆ. ಹೈನೋದ್ಯಮದಲ್ಲಿ ಪ್ರಮುಖ ಪಾತ್ರ. ಆದರೆ ಬಟವಾಡೆಗೆ ಹೋಗೋದು ಮಾತ್ರ ಪುರುಷರು. ಮಹಿಳೆಯರಿಂದಲೇ ಸಂಸಾರ ನಡೆಯಿತ್ತಿದೆ. ರೈತರಂತೆಯೇ ಮಹಿಳೆಯರಿಗೂ ಬಡ್ಡಿರಹಿತ ಸಾಲ ನೀಡಿದ ವ್ಯಕ್ತಿ ಸಿದ್ದರಾಮಯ್ಯ. ಜಿಲ್ಲೆಗೆ ಸಂಬಂಧಿಸಿದ 360 ಕೋಟಿರೂ ರೈತರ ಸಾಲಮನ್ನಾ ಆಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕಾಲು ಮೇಲೆ ತಾವು ನಿಂತು ಜೀವನ ನಡೆಸಲು ಅವರೇ ಕಾರಣ.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೆಸಿವ್ಯಾಲಿ ನೀರು ಕೊಟ್ಟ ಮಹಾನುಭಾವರು. ಯಾವ ಕೆರೆ ನೋಡಿದರೂ ನೀರು ಹರಿಯುತ್ತಿದೆ. ಸಿದ್ದರಾಮಯ್ಯ ಹೊಸದಾಗಿ ಶಾಸಕ, ಸಚಿವರಾವರಲ್ಲ. ಅನೇಕಬಾರಿ ಗೆದ್ದಿದ್ದಾರೆ. ಮುಖ್ಯಮಂತ್ರಿಯೂ ಆಗಿದ್ದಾರೆ. ಮೊದಲ ಮುಖ್ಯಮಂತ್ರಿ ನೀಡಿದ ಜಿಲ್ಲೆಯಿಂದ ಸಿದ್ದರಾಮಯ್ಯರನ್ನು ಗೆಲ್ಲಿಸಿ ಎರಡನೇ ಮುಖ್ಯಮಂತ್ರಿ ನೀಡಬೇಕೆಂದು ಕೋರಿದರು.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್ ಎರಡೂ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಬಡ್ಡಿ ಇಲ್ಲದೆ ಸಾಲ ನೀಡುವುದು ಸುಲಭದ ಕೆಲಸವಲ್ಲ, ಸರಕಾರ ಬಡ್ಡಿ ನೀಡುತ್ತದೆ. ಜಾಮೀನು, ಆಧಾರ ಇಲ್ಲದೆ ಸಾಲಕೊಡುವ ವ್ಯವಸ್ಥೆಯನ್ನು ಯುಪಿಎ ಸರಕಾರ ಮಾಡಿಕೊಟ್ಟಿತ್ತು ಎಂದರು.
ಕೆಸಿವ್ಯಾಲಿ, ಎತ್ತಿನಹೊಳೆ ಸೇರಿದಂತೆ ಅನೇಕ ಯೋಜನೆಗಳ ರೂವಾರಿ ಸಿದ್ದರಾಮಯ್ಯ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಂಡರೆ ಸಾಕಷ್ಟು ಅನುಕೂಲವಿದೆ ಎಂದರು.
ಬಿಕೆಎಸ್ ಟ್ರಸ್ಟ್‍ಗೆ ಸಿದ್ದರಾಮಯ್ಯ ಭೇಟಿ
ಸಮಾವೇಶಕ್ಕೂ ಮುನ್ನಾ ಮೊದಲು ಸಿದ್ದರಾಮಯ್ಯ ತಾಲ್ಲೂಕಿನ ಬೆಳ್ಳೂರಿನಲ್ಲಿರುವ ವಿಶ್ವವಿಖ್ಯಾತ ಪದ್ಮವಿಭೂಷಣ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರ ಸಂಸ್ಥೆಗೆ ಭೇಟಿ ನೀಡಿ, ಅಲ್ಲಿ ಬಿಕೆಎಸ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ನಂತರ ವೇಮಗಲ್‍ನಲ್ಲಿ ರೇಣುಕಾ ಯಲ್ಲಮ್ಮ, ಧರ್ಮರಾಯಸ್ವಾಮಿ ದೇವಾಲಯಗಳು, ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಸಭೆಯಲ್ಲಿ ಶಾಸಕರಾದಕೆ.ಆರ್.ರಮೇಶ್ ಕುಮಾರ್, ಕೆ.ವೈ.ನಂಜೇಗೌಡ, ಎಂಎಲ್ಸಿಗಳಾದ ನಜೀರ್ ಅಹಮದ್, ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಚಿವರಾದ ಎಂ.ಆರ್.ಸೀತಾರಾಂ, ಎಚ್.ಎಂ.ರೇವಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.