

ಕೋಲಾರ,ಮಾ.17: ನಾನು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಸಹ ನನ್ನ ಬೇರುಗಳು ಇರುವುದು ಕೋಲಾರದ ನೆಲದಲ್ಲಿಯೇ ಹಾಗಾಗಿ ನನ್ನ ಜನ್ಮಭೂಮಿ ಮತ್ತು ಕರ್ಮಭೂಮಿಯಾಗಿರುವ ಕೋಲಾರದ ಋಣವನ್ನು ತೀರಿಸಲು ನಿರಂತರವಾಗಿ ಶ್ರಮಿಸುವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಒಂದುಕೋಟಿ ರೂಗಳ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕರ್ನಾಟಕ ಸರ್ಕಾರದ 25 ಲಕ್ಷ ರೂಗಳ ಅನುದಾನವನ್ನು ಕೊಡುಗೆಯಾಗಿ ಕೊಡಿಸಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಪತ್ರಕರ್ತರ ಸಂಘದಿಂದ ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೋಲಾರಕ್ಕೆ ರಿಂಗ್ ರಸ್ತೆ ಸೌಕರ್ಯ ಸೇರಿದಂತೆ ಅಗತ್ಯವಾದ ಎಲ್ಲಾ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಿ ಕಾರ್ಯಗತಗೊಳಿಸಲು ಸಹಕರಿಸುವೆ ಎಂದು ಅವರು ತಿಳಿಸಿದರು.
ನನ್ನ ಹುಟ್ಟು, ಬಾಲ್ಯ ಹಾಗೂ ವೃತ್ತಿಯ ಆರಂಭದ ದಿನಗಳು ಕೋಲಾರದ ಮಣ್ಣಿನಲ್ಲಿ ಬೆರೆತಿವೆ. ನನ್ನ ಪತ್ರಿಕಾ ವೃತ್ತಿಯ ಜೊತೆಗೆ ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದು ಕೋಲಾರ ನಗರದ ಬೀದಿಗಳು, ಮಾಸಿದ ಬಟ್ಟೆಗಳಲ್ಲಿ ಓಡಾಡಿದ ಒಡನಾಟದ ಗೆಳೆಯರು ಹಾಗೂ ನನ್ನ ವ್ಯಕ್ತಿತ್ವವನ್ನು ರೂಪಿಸಲು ಮಾರ್ಗದರ್ಶನ ಮಾಡಿದ ಎಲ್ಲಾ ಹಿರಿಯ ಪತ್ರಕರ್ತರನ್ನು ಬದುಕಿನುದ್ದಕ್ಕೂ ಮರೆಯಲಾರೆ ಎಂದು ನುಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆಪತ್ಕಾಲೀನ ಸಂದರ್ಭದಲ್ಲಿ ಪತ್ರಕರ್ತರಿಗೆ ನೆರವಾಗಲು ಒಂದುಕೋಟಿ ರೂಗಳ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲು ಮುಂದಾಗಿರುವುದು ಅತ್ಯಂತ ಅಭಿನಂದನಾರ್ಹ ಕೆಲಸ. ಈ ಮಾರ್ಗದರ್ಶಿ ಯೋಜನೆಯನ್ನು ರೂಪಿಸಿರುವ ಸಂಘದ ಕಾರ್ಯಚಟುವಟಿಕೆಗೆ ಸಹಕರಿಸುವ ಮೂಲಕ ನನ್ನ ನೆಲದ ಪತ್ರಕರ್ತರಿಗೆ ನೆರವಾಗುವ ಸಲುವಾಗಿಯೇ ಮುಖ್ಯಮಂತ್ರಿಗಳ ಮನವೊಲಿಸಿ 25ಲಕ್ಷರೂ ಬಿಡುಗಡೆ ಮಾಡಿಸಿದೆ ಎಂದು ಪ್ರಭಾಕರ್ ನುಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಹ ಪತ್ರಕರ್ತರ ಬಗ್ಗೆ ಅತೀವ ಕಾಳಜಿ ವಹಿಸಿದ್ದಾರೆ ಹಾಗಾಗಿಯೇ ರಾಜ್ಯದ ಪತ್ರಕರ್ತರಿಗೆ ನೆರವಾಗುವ ಸಲುವಾಗಿ ಈ ಸಾರಿಯ ಬಜೆಟ್ನಲ್ಲಿ ಮಾಧ್ಯಮ ಸಂಜೀವಿನಿ ಯೋಜನೆ ಪ್ರಕಟಿಸಿದ್ದಾರೆ. ಇದಕ್ಕಾಗಿ ಹತ್ತುಕೋಟಿ ರೂಗಳ ಘೋಷಣೆ ಮಾಡಲಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವ ಈ ಯೋಜನೆಯಡಿ ಆರೋಗ್ಯ ಸಮಸ್ಯೆಗೆ ತುತ್ತಾಗುವ ಪತ್ರಕರ್ತರಿಗೆ ಐದು ಲಕ್ಷರೂವರೆಗೆ ಉಚಿತ ಚಿಕಿತ್ಸೆ ದೊರೆಯುತ್ತದೆ ಎಂದು ವಿವರಿಸಿದರು.
ಇದೇ ರೀತಿ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯವನ್ನು ಗ್ರಾಮೀಣ ಭಾಗದ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲು ಮುಖ್ಯ ಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದ್ದಾರೆ. ಸ್ಥಳೀಯ ಪತ್ರಿಕೆಗಳ ಬಿಲ್ ಹಲವು ತಿಂಗಳಿಂದ ಬಾಕಿ ಉಳಿದಿದ್ದು, 57 ಕೋಟಿ ರೂ ಸರ್ಕಾರದಿಂದ ಮಂಜೂರು ಮಾಡಿಸಲಾಯಿತು. ವಸತಿ ನಿಗಮದಲ್ಲಿ 7.5 ಸಾವಿರ ಖಾಲಿ ಇರುವುದಾಗಿ ಅಧ್ಯಕ್ಷರಾದ ಶಿವಲಿಂಗೇಗೌಡರು ಹಾಗೂ ವಸತಿ ಸಚಿವ ಲಕ್ಮೀನಾರಾಯಣ ಅವರಿಂದ ತಿಳಿದು ಬಂದಿದ್ದು ರಾಜ್ಯದಲ್ಲಿರುವ 5-6 ಸಾವಿರ ಮಂದಿ ಪತ್ರಕರ್ತರಿಗೆ ನಿವೇಶಗಳನ್ನು ಹಂಚಿಕೆ ಮಾಡುವ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದ ಅವರು ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಸಾಧ್ಯವಾದಷ್ಟು ಮಾಡಿಕೊಂಡು ಬರುತ್ತಿರುವೆ ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಮತ್ತು ಹಾಸ್ಯ ನಟ ಸಾಧು ಕೋಕಿಲ ಮಾತನಾಡಿ, ಕೋಲಾರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ನನ್ನ ತಾಯಿಯ ತವರು ಇದೇ ಕೋಲಾರವಾಗಿದೆ. ನನ್ನ ತಂದೆ ಬೆಮೆಲ್ ದಿನಗೂಲಿ ನೌಕರರಾಗಿದ್ದು ತೀರ ಬಡತನದ ಪರಿಸ್ಥಿತಿಯಲ್ಲಿ ಬೆಳೆದು ಅಲ್ಲಿನ ಮೇರಿಯಮ್ಮ ಚರ್ಚಿನಲ್ಲಿ ಮಲಗುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡರು.
ನಮ್ಮ ಜೀವನದಲ್ಲಿ ಗೆಳೆಯರು ಅನೇಕರು ಸಿಗಬಹುದು ಅದರೆ ಆತ್ಮೀಯರು ಸಿಗುವುದು ಅಪರೂಪ. ಅಂತಹ ಅಪರೂಪದ ಆತ್ಮೀಯ ಪ್ರಭಾಕರ್ ಅವರಿಗೆ ಒಳ್ಳೆಯದನ್ನು ಬಯಸುವ, ಕಷ್ಟಗಳಿಗೆ ಸ್ಪಂದಿಸುವಂತ ಮನಸ್ಸು ಇದೆ, ನಮ್ಮ ಗೆಳೆಯ, ನಮ್ಮ ಊರು, ನಮ್ಮ ಬಳಗ ಎಂಬ ಆತ್ಮೀಯತೆ ಹೊಂದಿರುವವರು ಲಕ್ಷಕ್ಕೆ ಒಬ್ಬರು, ಅಂತಹ ಲಕ್ಷದಲ್ಲಿ ನನಗೆ ಪ್ರಭಾಕರ್ ಒಬ್ಬರಾಗಿದ್ದಾರೆ ಎಂದು ಹೇಳಿದರು.
ವಸತಿ ಸಚಿವರ ಮಾದ್ಯಮ ಸಲಹೆಗಾರ ಎನ್.ಲಕ್ಷ್ಮೀನಾರಾಯಣ ಮಾತನಾಡಿ, ಕೆ.ವಿ. ಪ್ರಭಾಕರ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದು,್ದ ರಾಜ್ಯದಲ್ಲಿ ಸಣ್ಣ ಪತ್ರಿಕೆ, ದೊಡ್ಡ ಪತ್ರಿಕೆ ಎಂಬ ಭೇದ ಭಾವ ತೋರದೆ ಪತ್ರಕರ್ತರೆಲ್ಲಾರೂ ತಮ್ಮ ಕುಟುಂಬದವರಂತೆ ಭಾವಿಸಿ ಸ್ಪಂದಿಸುವ ಕೆಲಸವನ್ನು ಮಾಡುವ ಮೂಲಕ ನಮಗೆ ಆದರ್ಶವಾಗಿದ್ದಾರೆ. ಎಲ್ಲರ ಆಶೀರ್ವಾದದಿಂದ ಪತ್ರಿಕಾರಂಗದಿಂದ ಶಾಸಕಾಂಗದ ಸ್ಥಾನಮಾನಗಳು ಮುಂದಿನ ದಿನಗಳಲ್ಲಿ ಸಿಗುವಂತಾಗಲಿ ಎಂದು ಆಶಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಉನ್ನತ ಸ್ಥಾನಕ್ಕೇರಿದ ನಂತರ ಹತ್ತಿದ ಏಣಿಯನ್ನು ಮರೆತು ಒದೆಯುವವರೇ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ ಹತ್ತಿದ ಏಣಿಯ ಒಂದೊಂದು ಮೆಟ್ಟಲನ್ನು ನೆನಪಿನಲ್ಲಿಟ್ಟುಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡುವ ವ್ಯಕ್ತಿತ್ವವನ್ನು ಪ್ರಭಾಕರ್ ಹೊಂದಿದ್ದಾರೆ. ಅವರ ಇವತ್ತಿನ ಈ ಸ್ಥಾನಮಾನಕ್ಕೆ ಪರಿಶ್ರಮ ಮತ್ತು ಸ್ವಯಂಕೃಷಿಯೇ ಕಾರಣ ಎಂದು ಬಣ್ಣಿಸಿದರು.
ತನ್ನ ಸಹೋದ್ಯೋಗಿಗಳ ಕಷ್ಟಗಳಿಗೆ ನೆರವಾಗುವ ಗುಣದ ಪ್ರತಿಬಿಂಬ ಎಂಬಂತೆ ಕೋಲಾರ ಜಿಲ್ಲಾ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಡೆಯಿಂದ 25ಲಕ್ಷರೂ ಮಂಜೂರು ಮಾಡಿಸಿದ್ದಾರೆ. ಇದರೊಂದಿಗೆ ಸಂಘವು ತನ್ನ ಸ್ವಂತ ಸಂಪನ್ಮೂಲ ಐದು ಲಕ್ಷರೂ ಹೊಂದಿಸಿ 30 ಲಕ್ಷರೂಗಳ ಠೇವಣಿ ಇರಿಸಿದೆ. ಅದರಿಂದ ಬರುವ ಬಡ್ಡಿಯಲ್ಲಿ ಪತ್ರಕರ್ತರ ಆರೋಗ್ಯ ಚಿಕಿತ್ಸಾ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ ಎಂದರು.
ಇದರ ಜೊತೆಗೆ ಪತ್ರಕರ್ತರಿಗೆ ಆರೋಗ್ಯ ವಿಮೆ ಯೋಜನೆ, ಬಸ್ ಪಾಸ್ ಸೌಕರ್ಯ, ಪಿಂಚಣಿ ಹೆಚ್ಚಳ, ಸಣ್ಣ ಪತ್ರಿಕೆಗಳ ಜಾಹಿರಾತು ಬಾಕಿ ಹಣ ಬಿಡುಗಡೆ ಮಾಡಿಸುವ ಮೂಲಕ ಕರ್ನಾಟಕ ಸರ್ಕಾರವನ್ನು ಪತ್ರಕರ್ತರ ಸ್ನೇಹಿಯಾಗಿ ರೂಪಿಸುವಲ್ಲಿ ಪ್ರದಾನ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಕೆ.ವಿ.ಪ್ರಭಾಕರ್ ಅವರ ಪತ್ನಿ ಮೀರಾ ಪ್ರಭಾಕರ್ ಮಾತನಾಡಿ, ನಮ್ಮದು ಪ್ರೆಸ್ ಕುಟುಂಬ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ರಾಜ್ಯದ ಎಲ್ಲಾ ಪತ್ರಕರ್ತರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅದರಲ್ಲೂ ಕೋಲಾರದ ಪತ್ರಕರ್ತರ ಬಗ್ಗೆ ಹೆಚ್ಚು ಅಭಿಮಾನ ಇದೆ ಎಂದರು.
ಕೆ.ಯು.ಡ.ಬ್ಲ್ಯೂ.ಜೆ ಖಜಾಂಚಿ ಎಂ.ವಾಸುದೇವಹೊಳ್ಳ ಮಾತನಾಡಿ, ಇಡೀ ರಾಜ್ಯದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯಂತ ಕ್ರೀಯಾಶೀಲ ಸಂಘ ಎನಿಸಿದೆ. ಸಂಘದ ಮತ್ತು ಪತ್ರಕರ್ತರ ಚಟುವಟಿಕೆಗಳಿಗೆ ಯಾರ ಬಳಿಯು ಕೈಯೊಡ್ಡದೆ ಸ್ವಂತ ಸಂಪನ್ಮೂಲ ಬಳಿಸಿ ಸ್ವಾವಲಂಬನೆ ಸಾಧಿಸಿರುವ ಸಂಘ ಎನಿಸಿದೆ ಎಂದು ಬಣ್ಣಿಸಿದರು.
ಕೆ.ಯು.ಡ.ಬ್ಲ್ಯೂ.ಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೆ.ವಿ.ಪ್ರಭಾಕರ ಮತ್ತು ಸಾಧುಕೋಕಿಲ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿ ಮೆಟ್ಟಿನಿಂತು ಸಮಾಜದ ಉನ್ನತ ಸ್ಥಾನಕ್ಕೇರಿದ ಪ್ರತಿಭಾನ್ವಿತರು. ಅದರಲ್ಲೂ ಪತ್ರಕರ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಪ್ರಭಾಕರ್ ಮನೋಭಾವವು ಪತ್ರಕರ್ತರಲ್ಲಿ ಸ್ತೈರ್ಯ ಹೆಚ್ಚಿಸಿದೆ ಎಂದರು.
ಕೆ.ಯು.ಡ.ಬ್ಲ್ಯೂ.ಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಕಳೆದ 15 ವರ್ಷಗಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿಶ್ವಾಸ ಗಳಿಸಿಕೊಂಡು ಅವರ ಆಪ್ತ ವಲಯದಲ್ಲಿ ಒಬ್ಬರಾಗಿರುವ ಪ್ರಭಾಕರ್ ಅವರ ಮೇಲೆ ಕೋಲಾರದ ನಿರೀಕ್ಷೆಗಳು ಸಾಕಷ್ಟಿವೆ. ಕೋಲಾರ ರಿಂಗ್ ರಸ್ತೆ ಯೋಜನೆಗೆ ಅನುಮೋದನೆ ಕೊಡಿಸುವ ಮೂಲಕ ಸ್ಥಳೀಯರ ಬಹುದಿನಗಳ ಬೇಡಿಕೆ ಈಡೇರಿಸಬೇಕು ಎಂದು ಕೋರಿದರು.
ವೇದಿಕೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ನಿರ್ದೇಶಕ ಚಿದಾನಂದ ಪಟೇಲ್, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲಾ ತಾಲೂಕು ಸಂಘಗಳ ವತಿಯಿಂದ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.
